ಉಪ ಚುನಾವಣೆ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ

0
19

ಬೆಂಗಳೂರು

       ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿದ ನಂತರವೇ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬುಧವಾರ ತಿಳಿಸಿದರು.

       ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ಬಗ್ಗೆ ಅನುಮಾನಬೇಡ. ಸದ್ಯ ಉಪಚುನಾವಣೆ ಎದುರಾಗಿರುವ ಕಾರಣ ವಿಸ್ತರಣೆ ಕಡೆ ಗಮನಹರಿಸಲು ಸಾಧ್ಯವಿಲ್ಲ ಎಂದರು.

      ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಿತ್ಯ ಮಾಡುತ್ತಿದೆ. ನಮ್ಮ ಶಾಸಕರನ್ನು ಅಷ್ಟು ಸುಲಭವಾಗಿ ಎಳೆದುಕೊಳ್ಳಲು ಸಾಧ್ಯವಿಲ್ಲ. ಆದರೂ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅವರ ಪ್ರಯತ್ನ ಸಫಲವಾಗುವುದಿಲ್ಲ ಎಂದು ಹೇಳಿದರು.

      ಉಪಚುನಾವಣೆಗಳಲ್ಲಿ ಗೆಲ್ಲುವ ಕಾರ್ಯತಂತ್ರ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಎಲ್ಲ ನಾಯಕರೊಂದಿಗೆ ಚರ್ಚೆ ಮಾಡಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಗಳ ಸಮಸ್ಯೆ ಇಲ್ಲ. ಸಾಕಷ್ಟು ಮಂದಿ ಸಮರ್ಥರು ನಮ್ಮಲ್ಲಿದ್ದಾರೆ ಎಂದರು.

     ದಸರಾ ಉತ್ಸವವನ್ನು ಸಂಭ್ರಮದಿಂದ, ಸುರಕ್ಷಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ದಿನದ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಮೂರು ದಿನಗಳ ಕಾಲ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ದಸರಾಗೆ ಚಾಲನೆ ನೀಡಿದ ಸುಧಾಮೂರ್ತಿ ಅವರು ಕೊಡಗು ಮರುನಿರ್ಮಾಣಕ್ಕೆ 25 ಕೋಟಿ ರೂ. ನೀಡುತ್ತಿರುವುದು ಶ್ಲಾಘನೀಯ ಎಂದರು.

      ಬಿಡಿಎ ಅಧಿಕಾರಗಳ ಮೇಲೆ ಐಟಿ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಡಿಎ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here