ಬೆಳಗಾವಿ: ರಾಜ್ಯದಲ್ಲಿ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾಯೋಗಿಕತೆ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ಕೊಟ್ಟಿದೆ. ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಮತ್ತು ರಾಜ್ಯದ ಮೂಲೆಮೂಲೆಗಳಲ್ಲಿ ಗುಣಮಟ್ಟದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಲೆಯೆತ್ತಿ, ಶೈಕ್ಷಣಿಕ ಕ್ರಾಂತಿ ಸಂಭವಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬುಧವಾರ ಇಲ್ಲಿ ನಡೆದ ಕೆಎಲ್’ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರೀಸರ್ಚ್ ನ 12ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಎನ್’ಇಪಿ ದೇಶೀಯ ಮಾದರಿಯ ಸರ್ವಾಂಗೀಣ ಕಲಿಕೆಯನ್ನು ಮುನ್ನೆಲೆಗೆ ತರುತ್ತಿದೆ. ಇದರಿಂದ ಸುಸ್ಥಿರ ಮತ್ತು ಸಮಾನತೆಯನ್ನು ಆಧರಿಸಿದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಎನ್’ಇಪಿಯಲ್ಲಿ ಮೌಲ್ಯಗಳ ಜತೆಗೆ ಸಮಾಜಮುಖಿ ಶಿಕ್ಷಣವನ್ನು ಕೊಡಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೋದ ಶೈಕ್ಷಣಿಕ ವರ್ಷದಿಂದಲೇ ಎನ್ಇಪಿ ಅನುಷ್ಠಾನವಾಗಿದೆ ಎಂದು ಅವರು ನುಡಿದರು.
ಪ್ರಭಾಕರ ಕೋರೆ ಅವರ ದೂರದೃಷ್ಟಿಯಿಂದಾಗಿ ಕೆಎಲ್’ಇ ಅಗಾಧವಾಗಿ ಬೆಳೆದಿದೆ. ಇದರಿಂದಾಗಿ ಬೆಳಗಾವಿಯಂತಹ ಎರಡನೇ ಸ್ತರದ ನಗರ ಕೂಡ ಶೈಕ್ಷಣಿಕ ಸಂಸ್ಕೃತಿಯ ನಗರವಾಗಿ ಬೆಳೆದಿದೆ. ಕೆಎಲ್’ಇ ಇಂದು 290 ಸಂಸ್ಥೆಗಳ ಮಟ್ಟಿಗೆ ಬೆಳೆಯಲು ಕೋರೆ ಅವರ ಪರಿಶ್ರಮವೇ ಕಾರಣ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವೈದ್ಯಕೀಯ ಪದವಿ ಪಡೆದಿರುವವರು ಸಮಾಜದ ಸದಸ್ಯರಿಗೆ ಕೈಗೆಟುಕುವ ಹಾಗೆ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಬೇಕು ಎಂದು ಅವರು ಆಶಿಸಿದರು.
ಆರೋಗ್ಯ ಸೇವೆಗಳಿಗೆ ಜಗತ್ತಿನಲ್ಲಿ ಪ್ರಸ್ತುತ ಅಪಾರ ಬೇಡಿಕೆ ಇದೆ. ಆದರೆ, ಅವುಗಳ ದುಬಾರಿ ದರದಿಂದಾಗಿ ಜನರ ಕೈಗೆಟುಕುತ್ತಿಲ್ಲ. ಈ ಕಂದಕವನ್ನು ಹೊಸ ಪೀಳಿಗೆಯ ವೈದ್ಯಕೀಯ ಪದವೀಧರರು ಮುಚ್ಚಿ, ಸಮುದಾಯಗಳ ಮಟ್ಟದಲ್ಲಿ ಭರವಸೆ ಹುಟ್ಟಿದ ಬೇಕು ಎಂದು ಸಚಿವರು ಸೂಚಿಸಿದರು.
ಪ್ರಸ್ತುತ ಸಮಯದಲ್ಲಿ ಜೀವನಶೈಲಿಯ ಸಂಕೀರ್ಣತೆ ಮತ್ತು ಆಹಾರ ಕ್ರಮಗಳ ದೋಷದಿಂದ ಹತ್ತಾರು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಗೆ ಮತ್ತಷ್ಟು ಮಾನವೀಯ ಆಯಾಮ ಅಗತ್ಯವಿದೆ. ಇಲ್ಲದೆ ಹೋದರೆ ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸ ಬೇಕಾಗುತ್ತದೆ ಎಂದು ಅಶ್ವತ್ಥ ನಾರಾಯಣ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕೆಎಲ್’ಇ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.