ಹಿರಿಯೂರು:
ವರ್ಷ ಪೂರ್ತಿ ಓದಿದ ಪಠ್ಯಕ್ಕೆ ಕೇವಲ ಮೂರು ಗಂಟೆಗಳಲ್ಲಿ ಉತ್ತಿರಿಸಬೇಕಾಗಿದ್ದು ಪರೀಕ್ಷೆ ಎಂಬುದನ್ನು ಒತ್ತಡವನ್ನಾಗಿ ಮಾಡಿಕೊಳ್ಳಬೇಡಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂಬುದಾಗಿ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪುರಸ್ಕೃತರಾದ ಎಂ.ಆರ್.ಅಮೃತಲಕ್ಷ್ಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಲಕ್ಕವ್ವನಹಳ್ಳಿ ರಸ್ತೆ ಬಳಿ ಇರುವ ಇನ್ಸ್‍ಪೈರ್ ಸಂಸ್ಥೆಯ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ಸಿದ್ಧತೆ ಬಗ್ಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಯ ತುಂಬಾ ಅಮೂಲ್ಯವಾಗಿದ್ದು ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ಪೂರ್ವಯೋಜನೆಯಂತೆ ಓದಿಕೊಳ್ಳಿ ಪರೀಕ್ಷೆ ಸಂದರ್ಭದಲ್ಲಿ ನಿದ್ದೆಗೆಡುವುದು ಬೇಡ, ಓದಿ ಓದಿ ಬೇಸರ ಇದ್ದರೆ ಅರ್ಧಘಂಟೆ ನಿಮಗೆ ಇಷ್ಟವಾದ ಆಟ ಆಡಿ, ಸಂಗೀತ ಕೇಳಿ ಮನರಂಜನೆ ಪಡೆಯಿರಿ.ಶಾಲೆಗಳಲ್ಲಿ ಶಿಕ್ಷಕರು ಹೇಳಿಕೊಟ್ಟ ಪಠ್ಯಕ್ರಮವನ್ನು ಪರೀಕ್ಷಾ ಸಮಯದಲ್ಲಿ ನೆನಪಿಸಿಕೊಂಡು ಮೆಲುಕು ಹಾಕಿ ಎಂದು ತಿಳಿಸಿದರು.
ಅರ್ಧಘಂಟೆ ಮುಂಚಿತವಾಗಿ ಶಾಲಾ ಆವರಣ ತಲುಪಿರಿ ನಿಗದಿ ಪಡಿಸಿರುವ ಪೂರ್ತಿ ಅಂಕಗಳಿಗೂ ಉತ್ತರ ಬರೆಯಲು ಪ್ರಯತ್ನಿಸಿ, ನಿಮ್ಮ ಕೈಯಲ್ಲಿ ಗಡಿಯಾರ ಇರಲಿ ನೀರಿನ ಬಾಟಲ್ ಇರಲಿ, ನಿಮಗೇನಾದರೂ ಪರೀಕ್ಷೆ ಬಗ್ಗೆ ಯಾವುದೇ ಅನುಮಾನಗಳೇನಾದರೂ ಬಂದರೆ ಶಿಕ್ಷಕರೊಂದಿಗೆ ಚರ್ಚಿಸಿ ನಿಮ್ಮ ಉತ್ತರ ಪತ್ರಿಕೆಯಲ್ಲಿ ಅನಾವಶ್ಯಕ ಗೀಚುವುದು ಬೇಡ ಉತ್ತರ ಪತ್ರಿಕೆ ಅಂದವಾಗಿರಲಿ, ಬರೆಯಲಾಗದ ಪ್ರಶ್ನೆಗಳನ್ನು ನೋಡಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ, ಬರೆಯಲು ಸಿದ್ಧವಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದರು.
ನಿಮ್ಮ ಗುರಿಯನ್ನು ಸಾಧಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ, ತಂದೆ ತಾಯಿ ಶಿಕ್ಷಕರು ಮತ್ತು ಓದಿದ ಶಾಲೆಗೆ ಉತ್ತಮ ಕೀರ್ತಿ ತರುವ ಶಕ್ತಿ ನಿಮ್ಮಲ್ಲಿದೆ ಪ್ರಯತ್ನಿಸಿ ಎಂದರು. ಸ್ವಾಮಿ ವಿವೇಕಾನಂದರು ಹೇಳಿದಂತೆ ನಿಮ್ಮ ಜೀವನದ ಶಿಲ್ಪಿ ನೀವೇ ಆಗಿ ಎಂದು ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರನೀಡಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
ಸಂಸ್ಥೆಯ ಮುಖ್ಯಸ್ಥರು ಹಾಗೂ ಶಿಕ್ಷಣ ಪ್ರೇಮಿಗಳಾದ ಎ.ಬಾಲಾಜಿಯವರು ಮಾತನಾಡಿ ಆದಷ್ಟೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯಲಿ ಎಂಬ ಮಹದಾಸೆಯಿಂದ ಇಂತಹ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದರು ಹಾಗೂ ಸ್ವಾಮಿ ವಿವೇಕಾನಂದರು ಶಾರದಾಮಾತೆ ಮತ್ತು ರಾಮಕೃಷ್ಣ ಪರಮಹಂಸರ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು ಮತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಜೆ.ರಾಘವೇಂದ್ರಚಾರ್, ಹೆಚ್.ಎಂ.ನಸೀಮುನ್ನೀಸಾ ಮತ್ತಿತರರು ಉಪಸ್ಥಿತರಿದ್ದರು. ಹಿರಿಯೂರು ತಾಲ್ಲೂಕಿನ ಗನ್ನಾಯಕನಹಳ್ಳಿ, ಮ್ಯಾಕ್ಲೂರಹಳ್ಳಿ ಮತ್ತು ಕರಿಯೋಬೇನಹಳ್ಳಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
