ಕೈ ಹಿಡಿದ ಆಯನೂರು ಮಂಜುನಾಥ್….!

ಬೆಂಗಳೂರು

     ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಆಪರೇಷನ್ ಹಸ್ತ’ ಮುಂದುವರೆದಿದ್ದು, ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ್ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಇದೀಗ ಶಿವಮೊಗ್ಗದ ಹಿರಿಯ ನಾಯಕ, ಮಾಜಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

     ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡಲು ಆಯನೂರು ಮಂಜುನಾಥ್ ಅವರನ್ನು ಕರೆ ತರಲಾಗಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿ, ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಣೆದಿರುವ ತಂತ್ರಗಾರಿಕೆ ಇದಾಗಿದೆ.

    ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ಪಕ್ಷ ಸೇರ್ಪಡೆಯಾದರು. ಶಿಕಾರಿಪುರದ ನಾಗರಾಜ್ ಗೌಡ ಅವರು ಸಹ ಪಕ್ಷ ಸೇರಿದರು. ಈ ಸಂದರ್ಭದಲ್ಲಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.

     ನಂತರ ಮಾತನಾಡಿದ ಡಿಕೆ ಶಿವಕುಮಾರ್, “ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ ಎಂದರೆ ಪ್ರತಿ ನಿಲ್ದಾಣದಲ್ಲೂ ಬಸ್ ಇಳಿದು ಹತ್ತುವಂತೆ ಮಾಡುವುದಲ್ಲ,. ಒಮ್ಮೆ ಹತ್ತಿದರೆ ಕಡೆಯ ತನಕವೂ ಇರುವಂತಹ ದೃಢ ನಿರ್ಧಾರ ಮಾಡಬೇಕು. ಬಸ್ ಹತ್ತುವುದು, ಇಳಿಯುವುದು ಮಾಡಬಾರದು. ಮಾಡಿದರೆ ಆಗ ನಮ್ಮ ಬೆಲೆಯನ್ನೇ ಕಳೆದುಕೊಳ್ಳುತ್ತೇವೆ” ಎಂದರು.

    “ಪಕ್ಷದಲ್ಲಿ ಹೆಚ್ಚು ಕಾಲ ಇದ್ದಷ್ಟು ಹಿರಿತನ, ಜವಾಬ್ದಾರಿ ಮತ್ತು ಗೌರವ ಬರುತ್ತದೆ. ಬರುವುದು, ಹೋಗುವುದು ಮಾಡಿದರೆ ನಾಯಕತ್ವಕ್ಕೂ ಧಕ್ಕೆಯಾಗುತ್ತದೆ. ಈ ಮಾತನ್ನು ಕೇವಲ ಇಂದು ಪಕ್ಷ ಸೇರ್ಪಡೆಯಾದ ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಹೇಳುತ್ತಿಲ್ಲ, ರಾಜ್ಯದ ಸಮಸ್ತ ಕಾರ್ಯಕರ್ತರು, ಮುಖಂಡರಿಗೆ ಕಿವಿ ಮಾತು ಹೇಳುತ್ತಿದ್ದೇನೆ” ಎಂದು ತಿಳಿಸಿದರು.

“ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುವುದೇ ಒಂದು ಸೌಭಾಗ್ಯ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ರಕ್ತ ಸಾಮಾನ್ಯವಾದದ್ದಲ್ಲ ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ, ಕಾಂಗ್ರೆಸ್ಸಿಗನಾಗುವುದೆಂದರೆ ಅದು ಅಭಿಮಾನದ ಸಂಕೇತ. ಈ ರಾಷ್ಟ್ರ ಧ್ವಜ ಯಾರ ಹೆಗಲ ಮೇಲಿದೆ ಎಂದರೆ ಅದು ಕಾಂಗ್ರೆಸ್ಸಿಗರ ಹೆಗಲ ಮೇಲೆ ಮಾತ್ರ ನಾವೆಲ್ಲಾ ಅಭಿಮಾನದಿಂದ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳಬೇಕು ಎಂದರು.

   ಈಗ ನಾವು ಕೊಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ- ಜನತಾದಳ ಪಕ್ಷಗಳಿಗೆ ನೀಡಲು ಸಾಧ್ಯವಾಯಿತೇ? ಅರಣ್ಯ ಹಕ್ಕು, ಆದಿವಾಸಿಗಳ ಹಕ್ಕು ಸೇರಿದಂತೆ ಅನೇಕ ಕಾನೂನುಗಳನ್ನು ನೀಡಿದ್ದು ನಮ್ಮ ಕಾಂಗ್ರೆಸ್. ದೇಶದ ಎಲ್ಲಾ ಜಾತಿ, ಧರ್ಮಗಳ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ದಿವಂಗತ ಬಂಗಾರಪ್ಪ ಅವರು ಆಶ್ರಯ ಯೋಜನೆಗೆ ಹೊಸ ರೂಪ ನೀಡಿದರು, ಗ್ರಾಮ ದೇವತೆಗಳ ದೇವಾಲಯ ಜೀರ್ಣೋದ್ಧಾರಕ್ಕೆ ಆರಾಧನಾ ಯೋಜನೆ ಪ್ರಾರಂಭ ಮಾಡಿದ್ದೇ ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

  ಪಕ್ಷ ಸೇರ್ಪಡೆಯಾದ ಆಯನೂರು ಮಂಜುನಾಥ್ ಅವರು ಬಿಜೆಪಿಗೆ ಹೋದರು, ಜೆಡಿಎಸ್ ಸೇರಿದರು ಆದರೆ ಕಾಂಗ್ರೆಸ್ ಪಕ್ಷದ ಬಗೆಗಿನ ಒಲವು ಅವರನ್ನು ಮತ್ತೆ ಕರೆತಂದಿದೆ. ಎಲ್ಲಾ ನದಿಗಳು ಸಮುದ್ರ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಸೇರಲೇ ಬೇಕು, ನಮ್ಮ ಪಕ್ಷ ಸಮುದ್ರ ಇದ್ದಂತೆ.

   ನಮ್ಮ ಪಕ್ಷ ಸೇರುವವರಿಗೆ ಯಾವುದೇ ಸ್ಥಾನಮಾನ ನೀಡುತ್ತೇವೆ ಎನ್ನುವ ಭರವಸೆ ನೀಡಿಲ್ಲ. ಅವರ ಶಕ್ತಿ, ಸಂಘಟನಾ ಸಾಮರ್ಥ್ಯ ನೋಡಿ ಪರಿಗಣಿಸಲಾಗುವುದು. ಯಾರು ಪಕ್ಷದ ಬೆಳವಣಿಗೆಗೆ ತಳಮಟ್ಟದಿಂದ ಕೆಲಸ ಮಾಡಿರುತ್ತಾರೆ ಅವರಿಗೆ ಮೊದಲ ಆದ್ಯತೆ, ಹೊಸದಾಗಿ ಬಂದಿರುವವರು ಹಳಬರನ್ನು ತಳ್ಳಿ ಮುಂದೆ ಬರಲು ಈ ಡಿ.ಕೆ.ಶಿವಕುಮಾರ್ ಅವಕಾಶ ನೀಡುವುದಿಲ್ಲ ಎಂದರು.

   ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ, ಮೊದಲು ತಾಯಿ ಆನಂತರ ನಾವೆಲ್ಲಾ, ನಾನು ಮತ್ತು ಮುಖ್ಯಮಂತ್ರಿಗಳು ಸೇರಿ ತೀರ್ಮಾನ ಮಾಡಿದ್ದೇವೆ. ಇದು ಕೇವಲ ನನ್ನೊಬ್ಬನ ತೀರ್ಮಾನವಲ್ಲ. ಇಷ್ಟೊಂದು ಮಟ್ಟದಲ್ಲಿ ಪಕ್ಷ ಸೇರ್ಪಡೆಯಾಗುತ್ತಿರುವುದು ನೋಡಿ ಸಂತೋಷವಾಗುತ್ತಿದೆ.

     ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರದಲ್ಲಿ ಸೋಷಿಯಲ್ ಎಂಜಿನಿಯರಿಂಗ್ ತಿಳಿದುಕೊಳ್ಳದೆ ಎಡವಟ್ಟಾಯಿತು. ಲೋಕಸಭೆಯಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷ ಸೇರದೆ ಇಷ್ಟು ದಿನ ಮಾಡಿದ ತಪ್ಪನ್ನು ಮಾಡದೆ, ಎಲ್ಲಾ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಇಂದಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಿ ಎಂದು ಕಿವಿ ಮಾತು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap