ಮಡಿಕೇರಿ
ಕರ್ನಾಟಕ ಪ್ರವಾಸೋಧ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡುವಲ್ಲಿ ಹೆಸರು ಮಾಡಿರುವ ಕೊಡಗಿನಲ್ಲಿ ಆಗಾಗ್ಗೆ ಗಾಂಜಾದ ಕಮಟು ವಾಸನೆ ಮೂಗಿಗೆ ಬಡಿಯುತ್ತಲೇ ಇರುತ್ತದೆ. ಎಂಜಾಯ್ ಮಾಡಲೆಂದು ಬರುವ ಪ್ರವಾಸಿಗರಿಗೆ, ಕಾಲೇಜ್ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಸುಲಭವಾಗಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಸರಬರಾಜಾಗುತ್ತಿವೆ. ಹೀಗಾಗಿ ಇಲ್ಲಿನ ಬಹುತೇಕ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿ ಹೆತ್ತವರಿಗೆ ಹೊರೆಯಾಗುತ್ತಿದ್ದಾರೆ. ಜೊತೆಗೆ ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆಗೆ ಸೇರುತ್ತಿದ್ದಾರೆ.
ಅದರಲ್ಲೂ ಕೆಲವು ಪುಂಡ ಹುಡುಗರು ಸಿಗರೇಟ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ದಮ್ಮು ಹೊಡೆದು ಆ ಮತ್ತಿನಲ್ಲಿ ಹೊಡೆದಾಟ, ಬಡಿದಾಟಕ್ಕೂ ಮುಂದಾಗುತ್ತಿದ್ದಾರೆ. ಗಾಂಜಾ ಸೇರಿದಂತೆ, ಮಾದಕ ವಸ್ತುಗಳ ಅಮಲಿನಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಅಹಿತಕರ ಘಟನೆಗಳು ನಡೆದಿವೆ. ಇನ್ನು ಗಾಂಜಾ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಅವು ಜಿಲ್ಲೆಯೊಳಗೆ ನುಗ್ಗಿ ಬರುತ್ತಿದ್ದು, ಅಲ್ಲೊಂದು ಇಲ್ಲೊಂದು ಪ್ರಕರಣ ಮಾತ್ರ ಬೆಳಕಿಗೆ ಬರುತ್ತಿವೆ. ಉಳಿದಂತೆ ಎಲ್ಲವೂ ರಹಸ್ಯವಾಗಿಯೇ ನಡೆದುಹೋಗುತ್ತಿದೆ.
ಕೊಡಗು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು, ಹಣದ ವಹಿವಾಟುಗಳು ಚೆನ್ನಾಗಿ ನಡೆಯುತ್ತಿರುವುದರಿಂದ ಅದರಲ್ಲೂ ಪ್ರವಾಸೋದ್ಯಮ ಜಿಗಿತುಕೊಂಡ ಪರಿಣಾಮ ದೂರದಿಂದ ಬರುವ ಪ್ರವಾಸಿಗರು ಗಾಂಜಾದಂತಹ ಮಾದಕ ವಸ್ತುಗಳನ್ನು ಬಯಸುತ್ತಿರುವುದರಿಂದ ಕೆಲವರು ದಂಧೆಗಳನ್ನು ಕೂಡ ರಹಸ್ಯವಾಗಿಯೇ ಮಾಡುತ್ತಿದ್ದಾರೆ.
ಇಂತಹ ದಂಧೆಗಳನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಂತೆಯೇ ಕಾಣುತ್ತಿಲ್ಲ. ಇನ್ನು ಗಾಂಜಾ ದಂಧೆ ನಡೆಸುವವರು ಕೂಡ ಪ್ರವಾಸಿಗರು, ಕಾರ್ಮಿಕರು, ಕಾಲೇಜು ಹುಡುಗರನ್ನು ಟಾರ್ಗೆಟ್ ಮಾಡಿಕೊಂಡು ಜಿಲ್ಲೆಯೊಳಗೆ ಎಂಟ್ರಿಕೊಡುತ್ತಿದ್ದು, ಕೈತುಂಬಾ ಹಣ ಸಿಗುತ್ತಿರುವುದರಿಂದ ಸ್ಥಳೀಯರು ಕೂಡ ಇದರಲ್ಲಿ ಭಾಗೀದಾರರಾಗಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಪೊಲೀಸರು ಗಾಂಜಾ ಸಹಿತ ಒಂದಷ್ಟು ಮಂದಿಯನ್ನು ಬಂಧಿಸಿ ಜೈಲಿಗೆ ತಳ್ಳಿದರೂ ಕೂಡ ಜಾಮೀನಿನ ಮೇಲೆ ಬಂದು ಅದನ್ನೇ ಮಾಡುತ್ತಾರೆ. ಅಥವಾ ಮತ್ತೊಬ್ಬ ಗಾಂಜಾ ಸರಬರಾಜಿಗೆ ನಿಂತು ಬಿಡುತ್ತಾನೆ. ಹೀಗಾಗಿ ಪೊಲೀಸರ ಕಣ್ಣಿಗೆ ಬೀಳದೆ ಸ್ಥಳೀಯರಿಗೂ ತಿಳಿಯದಂತೆ ಬಹಳ ನಾಜೂಕಾಗಿ ಈ ವ್ಯವಹಾರಗಳು ನಡೆಯುತ್ತಿವೆ. ಇಷ್ಟಕ್ಕೂ ಕೊಡಗಿಗೆ ಗಾಂಜಾ ಎಲ್ಲಿಂದ ಬರುತ್ತದೆ? ಅದನ್ನು ಯಾರು ಸರಬರಾಜು ಮಾಡುತ್ತಿದ್ದಾರೆ. ಕಿಂಗ್ ಪಿನ್ ಯಾರು ಎಂಬುದು ಗೊತ್ತಾಗದೆ ಉಳಿದು ಹೋಗುತ್ತಿದೆ.
ಇದೀಗ ಜಿಲ್ಲೆಯೊಳಗೆ ಮಾರಾಟವಾಗಿ ವ್ಯಸನಿಗಳ ಕೈಗೆ ಸೇರಲಿದ್ದ ಗಾಂಜಾವನ್ನು ತಡೆಯುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಸುಮಾರು 8 ಮಂದಿ ಗಾಂಜಾ ಮಾರಾಟ ಮಾಡುವ ವೇಳೆಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಸೇವಿಸಿ ಕೆಲವರು ಹುಚ್ಚಾಟ ಆಡುತ್ತಿದ್ದು, ಅವರು ಮನೆಗೆ ಮಾತ್ರವಲ್ಲದೆ, ಊರಿಗೂ ಮಾರಿಯಾಗಿದ್ದಾರೆ. ಹೀಗಾಗಿ ಗಾಂಜಾ ಮಾರಾಟದ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರುಗಳು ಬರುತ್ತಲೇ ಇರುತ್ತವೆ.
ಈ ನಡುವೆ ಬುಧವಾರ (ಜುಲೈ 26) ಆರೋಪಿಗಳಾದ 1. ರಶೀದ್ (23), ಅರೇಕಾಡು, 2. ಹೆಚ್.ಆರ್ ಸುದೀಶ್, 23 ವರ್ಷ, ಒಂಟಿಯಂಗಡಿ, 3. ಇಮ್ರಾನ್ ಖಾನ್, 35 ವರ್ಷ, ಕೆಸಿಪಿ ಕಾಲೋನಿ, ಮೈಸೂರು, 4. ಎಂ.ಪ್ರಕಾಶ್, 24 ವರ್ಷ, ಮುರ್ತಾಮುಡಿ, 5. ಹೆಚ್.ಎಂ.ಶಾಂತಕುಮಾರ್, 27 ವರ್ಷ, ಚೇರಂಬಾಂಣೆ, 6. ಎಸ್.ಎಂ.ಸಜೀರ್, 37 ವರ್ಷ, ಕಡಗದಾಳು, 7. ಎಂ.ಇ.ನಿಯಾಜ್, 35 ವರ್ಷ, ಕಡಗದಾಳು, 8. ಇಮ್ರಾನ್ ಖಾನ್, 46 ವರ್ಷ, ಶಾಂತಿನಗರ, ಮೈಸೂರು ಎಂಬುವರು ಗಾಂಜಾದ ಮಾರಾಟದಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ವಿರಾಜಪೇಟೆಯ ಸಿಪಿಐ ಬಿ.ಎಸ್.ಶಿವರುದ್ರಪ್ಪ, ಪಿಎಸ್ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ವಿರಾಜಪೇಟೆಯ ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ಆರೋಪಿಗಳು ಗಾಂಜಾದೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ಆರೋಪಿಗಳಿಂದ 1 ಕೆ.ಜಿ 243 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.