ಮೈಸೂರು:
ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ದೂರದ ಹಳ್ಳಿಗಳು ಆಂಬ್ಯುಲೆನ್ಸ್ ಸೇವೆಗಳ ಅಲಭ್ಯತೆಯಿಂದಾಗಿ ಇಲ್ಲಿನ ನಿವಾಸಿಗಳು ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಕಳೆದ ಆರು ತಿಂಗಳಿನಿಂದ ಹನೂರು ತಾಲೂಕಿನ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಎಂ.ಎಂ.ಹಿಲ್ಸ್‌ನ ಪರಿಸ್ಥಿತಿಯೂ ಅಷ್ಟೇ ಶೋಚನೀಯವಾಗಿದೆ, ದಶಕದ ಹಿಂದೆ ಖರೀದಿಸಿದ ಆಂಬ್ಯುಲೆನ್ಸ್, ಟೈರ್ ಕೊರತೆಯಿಂದ ನಿರುಪಯುಕ್ತವಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ನಿಲ್ಲಿಸಲಾಗಿದೆ.
ಕೌಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಏಕೈಕ ಆಂಬ್ಯುಲೆನ್ಸ್ ಮಾತ್ರ ಕಾರ್ಯನಿರ್ವಹಿಸುತ್ತಿದೆ, ಆದರೆ ಈ ಎಲ್ಲಾ ಸ್ಥಳಗಳಿಗೆ ಇದೊಂದೇ ಆ್ಯಂಬುಲೆನ್ಸ್ ಹೋಗಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ತುರ್ತು ಸೇವೆಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.
ಈ ಯಾಂತ್ರಿಕ ವೈಫಲ್ಯಗಳು ಹಳ್ಳಿಗರನ್ನು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಿದೆ. ಸೋಮವಾರ ಗರ್ಭಿಣಿ ಮಹಿಳೆಯೊಬ್ಬರಿಗೆ ಆಂಬ್ಯುಲೆನ್ಸ್ ಸೇವೆ ಸಿಗದೆ, ಖಾಸಗಿ ಕಾರಿನೊಳಗೆ ಹೆರಿಗೆ ಮಾಡುವಂತ ಪರಿಸ್ಥಿತಿ ಎದುರಾಯಿತು. ಇದು ಇಲ್ಲಿನ ಪರಿಸ್ಥಿತಿಯ ಗಂಭೀರತೆ ಬಗ್ಗೆ ಹಿಡಿದ ಕನ್ನಡಿಯಾಗಿದೆ.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಂಬುಲೆನ್ಸ್ ಲಭ್ಯವಿರಲಿಲ್ಲ, ಕೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆ್ಯಂಬುಲೆನ್ಸ್ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಆಂಬುಲೆನ್ಸ್ ಗಾಗಿ ಕಾಯಲು ಪ್ರಯತ್ನಿಸಿದರು. ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆದ ಕೂಡಲೇ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತೆಯರೊಬ್ಬರ ಖಾಸಗಿ ಕಾರಿನಲ್ಲಿ ಕರೆದುಕೊಂಡು ಹೋಗಲಾಗಿದ್ದು, ದಾರಿ ಮಧ್ಯೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.
ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು ಆತಂಕ ಮತ್ತು ಸಂಕಷ್ಟದ ಕಥೆಗಳನ್ನು ಮೆಲುಕು ಹಾಕುತ್ತಾರೆ. ಯಾವುದೇ ಕಾರ್ಯನಿರ್ವಹಣೆಯ ಆಂಬ್ಯುಲೆನ್ಸ್‌ಗಳಿಲ್ಲದೆ, ಅವರು ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗುತ್ತಾರೆ, ಅವುಗಳು ತುರ್ತು ವೈದ್ಯಕೀಯ ಸಾರಿಗೆಗೆ ಸೂಕ್ತವಲ್ಲ. ಕೂಡಲೇ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಆಗ್ರಹಿಸಿದ್ದಾರೆ.
ಇದು ಜೀವನ್ಮರಣದ ಸಮಸ್ಯೆಯಾಗಿದೆ ಎನ್ನುತ್ತಾರೆ ಹನೂರಿನ ನಿವಾಸಿ ಮಹೇಶ. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು, ಇರುವ ಆ್ಯಂಬುಲೆನ್ಸ್ ಗಳನ್ನು ರಿಪೇರಿ ಮಾಡಿಸಲಿ ಅಥವಾ ಸೇವೆಗಾಗಿ ಹೊಸ ಮತ್ತು ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.