ಘೋಷಣೆಗಷ್ಟೇ ಸೀಮಿತವಾಯ್ತೆ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್

ತುಮಕೂರು:

ಬೊಮ್ಮಾಯಿ ಬಜೆಟ್‍ನಲ್ಲಿ ಮತ್ತೆ ಗರಿಗೆದರಿದ ನಿರೀಕ್ಷೆ

ಕಳೆದ ನಾಲ್ಕೈದು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕೇಳಿಬರುತ್ತರುವುದು ತೆಂಗು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಹಾಗೂ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್.

ಇಡೀ ರಾಜ್ಯದಲ್ಲಿ ಅಷ್ಟೇ ಏಕೆ ರಾಷ್ಟ್ರ ಮಟ್ಟದಲ್ಲಿಯೂ ತುಮಕೂರು ಜಿಲ್ಲೆ ತೆಂಗು ಬೆಳೆಯಲ್ಲಿ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ತಿಪಟೂರಿನ ಕೊಬ್ಬರಿ ವಿಶಿಷ್ಟ ಮತ್ತು ವಿಭಿನ್ನ. ಕೇರಳಕ್ಕಿಂತಲೂ ಹೆಚ್ಚಿನ ಬೇಡಿಕೆ ಇಲ್ಲಿನ ಕೊಬ್ಬರಿಗೆ ಇದೆ. ನೈಸರ್ಗಿಕವಾಗಿ ಬೆಳೆಯುವ ಕೊಬ್ಬರಿ ಇಲ್ಲಿ ಸಿಗುವುದರಿಂದ ಹಾಗೂ ರುಚಿಯೂ ಇರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.

ತೆಂಗಿನಿಂದ ಬರುವ ಉತ್ಪನ್ನಗಳು ಹಲವು. ತೆಂಗಿನ ಕಾಯಿ ಮಾಗಿದಾಗ ಕೊಬ್ಬರಿಯಾಗುತ್ತದೆ. ಇದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತದೆ. ಇದೇ ರೀತಿ ತೆಂಗಿನಲ್ಲಿ ಉತ್ಪಾದನೆಯಾಗುವ ಎಲ್ಲ ವಸ್ತುಗಳಿಗೂ ಬೇಡಿಕೆ ಇದೆ. ಚಿಪ್ಪು, ಮಟ್ಟೆ, ನಾರು, ಗರಿ ತೆಂಗಿನ ಮರ ಸೇರಿದಂತೆ ಎಲ್ಲದಕ್ಕೂ ಬೇಡಿಕೆ ಇದೆ.

ಇದೆಲ್ಲದನ್ನು ಪರಿಗಣಿಸಿ ತೆಂಗಿನ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿ ತೆಂಗು ಪಾರ್ಕ್ ನಿರ್ಮಾಣದ ಕೂಗು ಬಹಳ ವರ್ಷಗಳಿಂದ ಕೇಳಿಬರುತ್ತಲೇ ಇದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 2020 ರ ಬಜೆಟ್‍ನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ತಿಪಟೂರಿನಲ್ಲಿ ಆರಂಭ ಮಾಡುವುದಾಗಿ ಘೋಷಿಸಿದ್ದರು. ಈ ಘೋಷಣೆಯಾಗಿ 2 ವರ್ಷಗಳು ಮುಗಿದು ಹೋದವು. ಆದರೆ ಬಜೆಟ್‍ನ ಘೋಷಣೆ ಕೇವಲ ಕಾಗದದಲ್ಲಿಯೇ ಉಳಿಯುವಂತಾಯಿತು.

ಈಗ ಮತ್ತೆ ಮಾ.4 ರಂದು ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್‍ನಲ್ಲಿ ತೆಂಗು ಪಾರ್ಕ್ ಪ್ರಸ್ತಾಪವಾಗಲಿದೆಯೇ ಎಂಬ ಕೂಗು ಮತ್ತೆ ಕೇಳಿಬರತೊಡಗಿದೆ.

ತೆಂಗಿಗೆ ಸಂಬಂಧಿಸಿದ ಉತ್ಪಾದನೆಗಳ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ತೆಂಗು ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು, ಈ ಯೋಜನೆಯನ್ನು ಬಜೆಟ್‍ನಲ್ಲಿ ಸೇರಿಸಬೇಕು ಎಂದು ಜಿಲ್ಲೆಯ ಹಲವು ನಾಯಕರು ಮುಖ್ಯಮಂತ್ರಿಗಳಿಗೆ ಕಳೆದ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ ಅದಿನ್ನೂ ಕೈಗೂಡಿಲ್ಲ.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗಲೆ ತೆಂಗು ಪಾರ್ಕ್ ಯೋಜನೆ ಜಿಲ್ಲೆಯಲ್ಲಿ ಮೊಳಕೆಯೊಡೆದಿತ್ತು. ಜಿಲ್ಲಾ ತೋಟಗಾರಿಕೆ ಇಲಾಖೆ ಮೂಲಕ ತಿಪಟೂರು, ಶಿರಾ ತಾಲ್ಲೂಕಿನ ಮಾನಂಗಿ, ತುರುವೇಕೆರೆ ತಾಲ್ಲೂಕಿನ ಚಿಕ್ಕಪುರದಲ್ಲಿ ತೆಂಗು ಪಾರ್ಕ್ ನಿರ್ಮಾಣಕ್ಕೆ ಆಗ ಸರ್ಕಾರ ಅನುಮೋದನೆ ನೀಡಿ ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಿತ್ತು.

ಮೊದಲ ಹಂತದಲ್ಲಿ ಮಾನಂಗಿ ಬಳಿ ಕಟ್ಟಡಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ 1.75 ಕೋಟಿ ರೂ. ನೀಡಲಾಗಿತ್ತು. 2018ರ ಮಾರ್ಚ್ ತಿಂಗಳಿನಲ್ಲಿ ಇಷ್ಟು ಹಣ ಹಾಗೂ ಅದರ ಬಡ್ಡಿಯನ್ನು ಮರಳಿಸುವಂತೆ ಸರ್ಕಾರ ಪತ್ರ ಬರೆಯಿತು. ಅದರಂತೆ ಹಣ ಮತ್ತೆ ಸರ್ಕಾರ ಸೇರಿತು.

ಬಹಳ ದಿನಗಳಿಂದ ಕಾಯುತ್ತಿದ್ದ ಇಂತಹ ಒಂದು ಯೋಜನೆಯ ಕನಸು ನನಸಾಗಲೇ ಇಲ್ಲ. ಇನ್ನೇನು ಸರ್ಕಾರದ ಘೋಷಣೆ ಕೈಗೂಡಿತು ಎನ್ನುವಷ್ಟರಲ್ಲಿ ಸದ್ದಿಲ್ಲದಂತೆ ಈ ಯೋಜನೆ ಕಣ್ಮರೆಯಾಗುತ್ತಿದೆ. ಕಾರಣ ಏನೆಂದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಈಗ ಇಬ್ಬರು ಸಚಿವರಿದ್ದಾರೆ.

ಇಬ್ಬರೂ ಸಹ ತೆಂಗು ಬೆಳೆಯುವ ತಾಲ್ಲೂಕಿನವರು. ಇಬ್ಬರಿಗೂ ತೆಂಗು ಮತ್ತು ಕೊಬ್ಬರಿ ಉತ್ಪನ್ನಗಳ ಸಂಪೂರ್ಣ ಅರಿವಿದೆ. ತೆಂಗು ಪಾರ್ಕ್ ಆಗಬೇಕೆಂಬ ಕನಸು ಇವರಿಗೂ ಇತ್ತು. ಈಗ ಸರ್ಕಾರದಲ್ಲಿ ಇಬ್ಬರೂ ಉನ್ನತ ಹುದ್ದೆಯಲ್ಲಿರುವುದರಿಂದ ಸಹಜವಾಗಿಯೇ ತೆಂಗು ಬೆಳೆಯುವ ನಾಡಿನಲ್ಲಿ ಮತ್ತೆ ಹೊಸ ಆಶಾಕಿರಣ ಚಿಗುರೊಡೆದಿದೆ.

ಜಿಲ್ಲೆಯವರೇ ಆದ ಬಿ.ಕೆ.ಮಂಜುನಾಥ್ ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ತೆಂಗು ಬೆಳೆಯುವ ಪ್ರಮುಖ ತಾಲ್ಲೂಕುಗಳಲ್ಲಿ ಬಿಜೆಪಿಯವರೇ ಇದ್ದಾರೆ.

ತಿಪಟೂರು, ತುಮಕೂರು, ಚಿ.ನಾ.ಹಳ್ಳಿ, ತುರುವೇಕೆರೆ, ಶಿರಾದಲ್ಲಿ ಬಿಜೆಪಿಯವರೇ ಗೆದ್ದಿದ್ದಾರೆ. ಹೀಗಾಗಿ ಈ ಬಾರಿ ತೆಂಗು ಅಭಿವೃದ್ಧಿ ಪಾರ್ಕ್ ಬಜೆಟ್‍ನಲ್ಲಿ ಸೇರ್ಪಡೆಯಾಗುವುದೆ? ಬಹಳ ದಿನಗಳ ಘೋಷಣೆ ಈಡೇರುವುದೆ ಎಂಬ ಕಾತರ ತೆಂಗು ಬೆಳೆಯುವ ವಲದಯಲ್ಲಿದೆ.

ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆಯಾಗಿದೆ. ತೆಂಗಿನ ಮೌಲ್ಯ ವರ್ಧನೆಯ ಹಿನ್ನೆಲೆಯಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ಜಿಲ್ಲೆಯ ರೈತ ಮುಖಂಡರು, ಬೆಳೆಗಾರರು ಹಾಗೂ ತೆಂಗು ಬೆಳೆಗಾರರ ಒಕ್ಕೂಟಗಳು ಬಹಳ ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ.

ತೆಂಗು ಪಾರ್ಕ್ ನಿರ್ಮಾಣವಾಗುವುದರಿಂದ ನೆರೆಹೊರೆಯ ಜಿಲ್ಲೆಗಳಲ್ಲಿ ತೆಂಗು ಬೆಳೆಯುವ ರೈತರಿಗೂ ಅನುಕೂಲವಾಗಲಿದೆ.

ಇಬ್ಬರು ಸಚಿವರು ತೆಂಗು ನಾಡಿನವರೆ
ಜಿಲ್ಲೆಯಲ್ಲಿ ಈಗ ಇಬ್ಬರು ಸಚಿವರಿದ್ದಾರೆ. ಜೆ.ಸಿ. ಮಾಧುಸ್ವಾಮಿ ಹಾಗೂ ಬಿ.ಸಿ.ನಾಗೇಶ್ ಇಬ್ಬರೂ ಹೆಚ್ಚು ತೆಂಗು ಬೆಳೆಯುವ ತಾಲ್ಲೂಕಿನವರು. ತೆಂಗು ಅಭಿವೃದ್ಧಿ ಪಾರ್ಕ್ ಸ್ಥಾಪನೆಗೆ ಇವರದ್ದೂ ಒತ್ತಾಯ ಕೇಳಿ ಬಂದಿತ್ತು.

2020ರ ಬಜೆಟ್‍ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಆ ಘೋಷಣೆ ಅಷ್ಟಕ್ಕೆ ಸೀಮಿತವಾಯಿತು. ಇದೀಗ ಮತ್ತೆ ಈ ಬಗೆಗಿನ ಚರ್ಚೆಗಳು ಮುನ್ನಲೆಗೆ ಬಂದಿವೆ.

               – ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ