ಚಂದ್ರಯಾನ-3 : ಇತಿಹಾಸ ಬರೆದ ಇಸ್ರೋ….!

ನವದೆಹಲಿ :

     ‘ಚಂದ್ರಯಾನ-3’ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಭಾರತ ಅಂದುಕೊಂಡಂತೆ ಈ ಯೋಜನೆಯಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ 4 ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆ ಆಗಿದೆ. ಇಂದು ಸಂಜೆ ಸರಿಯಾಗಿ 6 ಗಂಟೆ 4 ನಿಮಿಷಕ್ಕೆ ಇಸ್ರೋ ಸಂಸ್ಥೆಯ ‘ಚಂದ್ರಯಾನ-3’ ಲ್ಯಾಂಡರ್ ವಿಕ್ರಮ್, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿದೆ.

      ಇಸ್ರೋ ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದೆ. ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಡೀ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಹೀಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಬಾಹ್ಯಾಕಾಶ ಲೋಕಕ್ಕೆ ಭಾರತ ದೊರೆ ಎಂಬುದನ್ನ ಇಸ್ರೋ ಸಂಸ್ಥೆ ಮತ್ತೆ ಜಗತ್ತಿಗೇ ಸಾರಿ ಹೇಳಿದೆ. 

     ‘ಚಂದ್ರಯಾನ-3’ ಸಕ್ಸಸ್, ಇತಿಹಾಸ ಬರೆದ ಭಾರತ! ಹೇಗಿತ್ತು ಗೊತ್ತಾ ಲ್ಯಾಂಡಿಂಗ್ ಸಂಕಷ್ಟ? ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆ ಭಾರಿ ಸವಾಲಿನಿಂದ ಕೂಡಿತ್ತು. ಆದ್ರೆ ಇಸ್ರೋ ಆಧುನಿಕ ತಂತ್ರಜ್ಞಾನ ಬಳಸಿ ‘ಚಂದ್ರಯಾನ-3’ ಯೋಜನೆಯಲ್ಲಿ ಯಶಸ್ವಿಯಾಗಿದೆ. ಭಾರತದ ಈ ಗೆಲುವು ಭಾರತೀಯರಿಗೆ ಮಾತ್ರವಲ್ಲ, ಇಡೀ ಮನಷ್ಯರ ಕುಲಕ್ಕೆ ಸೇರಿದ ಗೆಲುವು. ಭವಿಷ್ಯ ಮತ್ತಷ್ಟು ಉಜ್ವಲವಾಗಲು ಮನಷ್ಯರ ಬದುಕು ಮತ್ತಷ್ಟು ಸುಲಭವಾಗಲು ಚಂದ್ರಯಾನ-3 ಗೆಲುವು ಹೊಸ ದಾರಿ ತೋರಿಸಿದೆ. ಚಂದ್ರನಲ್ಲಿ ನೀರು ಮತ್ತು ಖನಿಜಗಳು ಸಿಕ್ಕರೆ ಭಾರತ ಮತ್ತಷ್ಟು ಶ್ರೀಮಂತ ರಾಷ್ಟ್ರವಾಗಲಿದೆ. ಹೀಗಾಗಿ ಚಂದ್ರನ ದಕ್ಷಿಣ ಧ್ರುವದ ಅಧ್ಯಯನವು ಭಾರತಕ್ಕೆ ದೊಡ್ಡ ಲಾಭ ತಂದುಕೊಡಲಿದೆ.

    ಚಂದ್ರನ ಮೇಲೆ ಸಿಗೋ ನೀರಿನಿಂದ ಏನೇನ್ ಮಾಡಬಹುದು? ಕಡಿಮೆ ಖರ್ಚು, ದೊಡ್ಡ ಗೆಲುವು! ಅಷ್ಟಕ್ಕೂ ಇತರ ದೇಶಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ ‘ಚಂದ್ರಯಾನ-3’ ಯೋಜನೆ ಕೈಗೊಂಡಿತ್ತು. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲೂ ಕಡಿಮೆ ಎನ್ನಬಹುದು.

    ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶ ಮಾಡಿತ್ತು. ಈಗ ನೋಡಿದರೆ ಇಡೀ ಜಗತ್ತು ತಿರುಗಿ ನೋಡುವಂತೆ ಚಂದ್ರನ ಮೇಲೆ ತನ್ನ ಲ್ಯಾಂಡರ್ ಅನ್ನು ಇಳಿಸಿದೆ ಇಸ್ರೋ ಸಂಸ್ಥೆ. 

     ರಷ್ಯಾ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ ಲ್ಯಾಂಡ್‌ ಮಾಡಲು ಲೂನಾ-25 ನೌಕೆಯನ್ನು ಆಗಸ್ಟ್‌ 11ರಂದು ಉಡಾವಣೆ ಮಾಡಿತ್ತು. ಈ ಯೋಜನೆಯಲ್ಲಿ ರಷ್ಯಾ ಸೋಲು ಕಂಡಿದ್ದು ವಿಜ್ಞಾನಿಗಳಿಗೆ ಸಾಕಷ್ಟು ಬೇಸರ ತರಿಸಿತ್ತು. ಆದ್ರೆ ರಷ್ಯಾ ಸೋಲಿನ ನೋವನ್ನ ಭಾರತದ ಸಾಧನೆ ದೂರ ಮಾಡಿದೆ. ‘ಚಂದ್ರಯಾನ-3’ ಯೋಜನೆಯಲ್ಲಿ ಭಾರತ ಗೆದ್ದು ಬೀಗಿದೆ.

     ಒಟ್ನಲ್ಲಿ ಭಾರತದ ಸಾಧನೆಗೆ ಪ್ರಪಂಚ ಸಲಾಂ ಹೊಡೆದಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿ ಭಾರತ ಇತಿಹಾಸ ಬರೆದಿದೆ. ಇಲ್ಲಿ ಉಷ್ಣಾಂಶವು ಮೈನಸ್ 230 ಡಿಗ್ರಿಗಿಂತ ಕಡಿಮೆ ಇರುತ್ತದೆ. ಬೆಳಕು ಕಾಣದ ಎಷ್ಟೋ ಪ್ರದೇಶಗಳು ಇಲ್ಲಿವೆ. ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿ ತಿಳಿಸಿತ್ತು. ಹೀಗೆ ಭಾರತ 2008ರಲ್ಲಿ ಚಂದ್ರನ ಮೇಲೆ ನೀರು ಕಂಡುಹಿಡಿದ ನಂತರ, ಜಗತ್ತಿನ ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಆರಂಭಿಸಲು ಯೋಜನೆ ರೂಪಿಸಿ ಸಿದ್ಧತೆ ನಡೆಸುತ್ತಿದ್ದಾರೆ. ಆದ್ರೆ ಭಾರತ ಈಗ ನೇರವಾಗಿ ವಿಕ್ರಮ್ ಲ್ಯಾಂಡರ್ ಅನ್ನ ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap