ದಾವಣಗೆರೆ:
ಭಾರತವು ಚೀನಾವನ್ನು ಹಿಂದಿಕ್ಕಿ ಮುಂದೆ ಹೋಗುವ ಕಾಲ ಸಮೀಪಿಸಿದ್ದು, ಇದರ ಸಾಕಾರಕ್ಕಾಗಿ ದೇಶದ ಯುವ ವಿದ್ಯಾರ್ಥಿಗಳು ಹಿಮಾಲಯದೆತ್ತರ ಗುರಿ ಹೊಂದಿ ಅದರ ಸಾಧನೆಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ತಿರುಚನಾಪಲ್ಲಿಯ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮೇನೇಜ್ ಮೆಂಟ್ ನ ನಿರ್ದೇಶಕ ಡಾ.ಭೀಮರಾಯ ಮೇತ್ರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಬಾಪೂಜಿ ಮೇನೇಜ್‍ಮೆಂಟ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದ ನಾಲ್ಕು ಮಿಲಿಯನ್ ನಷ್ಟು ಉದ್ಯೋಗಿಗಳನ್ನು ಯಂತ್ರ ಮಾನವರು ನಿಯಂತ್ರಿಸುವ ಕಾಲ ಇದಾಗಿದ್ದು ಕೃತಕ ಬುದ್ದಿ ಮತ್ತೆಯ ಅದ್ಬುತ ಯಂತ್ರ ಮಾನವರನ್ನು ಸೃಷ್ಠಿಸುವವರು ನಾವಾಗಬೇಕು. ಅದಕ್ಕಾಗಿ ನಿರಂತರ ಅಧ್ಯಯನದೊಂದಿಗೆ ವಿಭಿನ್ನವಾದುದನ್ನು ಮಾಡುವ ಹುಚ್ಚು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಮ್ಮ ಉತ್ಪಾದನೆಗಳು ವೆಚ್ಚದಲ್ಲಿ ಅಗ್ಗವೂ, ತಯಾರಿಕೆಯಲ್ಲಿ ವೇಗವೂ, ಬಳಕೆಯಲ್ಲಿ ಗುಣಮಟ್ಟವೂ ಆಗಿರುವುದುಮುಖ್ಯ.ಈಗ ನಾವು ಏನು ಮಾಡುತ್ತೇವೆಂಬುದರ ಮೇಲೆ ದೇಶದ ಭವಿಷ್ಯ ನಿಂತಿದ್ದು ಯುವ ವಿದ್ಯಾರ್ಥಿಗಳು ಸ್ವತಃ ನಾಯಕರಾದರೆ ಸಾಲದು ಸಮರ್ಥ ನಾಯಕರನ್ನು ತಯಾರು ಮಾಡುವಂತವರಾಗಬೇಕು ಎಂದರು.
ದಾವಣಗೆರೆ ವಿವಿಯ ಮಾಜಿ ಕುಪತಿ ಡಾ.ಇಂದುಮತಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಹೊರದೇಶಗಳಿಗೆ ಕೆಲಸಕ್ಕಾಗಿ ಹೋಗುವ ಸ್ಥಿತಿ ಬದಲಾಗಬೇಕು. ಹೊರದೇಶದವರೇ ನಮ್ಮ ದೇಶಕ್ಕೆ ಉದ್ಯೋಗಾರ್ಥಿಗಳಾಗಿ ಬರಬೇಕು ಇದಕ್ಕಾಗಿ ವಿದ್ಯಾರ್ಥಿಗಳು ವಿಭಿನ್ನವಾದುದನ್ನು ಮಾಡುವ ಮೂಲಕ ಜಗತ್ತಿನಲ್ಲಿ ಗುರುತಿಸಿ ಕೊಳ್ಳುವಂತಾಗಬೇಕು ಮಾಡುವುದನ್ನು ಪ್ರಾಮಾಣಿಕವಾಗಿ ಮಾಡಬೇಕು. ಭ್ರಷ್ಠಾಚಾರದಿಂದ ಹೊರತಾಗಿರಬೇಕು ಎಂದರು.
ಬಾಪೂಜಿ ಬಿ ಸ್ಕೂಲ್ಸ್ ನ ನಿದೇರ್ಶಕ ಡಾ.ಸ್ವಾಮಿ ತ್ರಿಭುವನಾನಂದ ಮೇನೇಜ್ ಮೆಂಟ್ ಪದವೀಧರ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.ವಿವಿಯ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ಹಾಗೂ ಮೇನೇಜ್ ಮೆಂಟ್ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.ವಿಭಾಗ ಮುಖ್ಯಸ್ಥ ಡಾ.ಸುಜಿತ್ ಕುಮಾರ್ ಎಸ್.ಹೆಚ್ ಸ್ವಾಗತ ಕೋರಿದರು.ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ನಾಗರಾಜ್ ವಂದನೆಗಳನ್ನು ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
