ಬೆಂಗಳೂರು : ಜನಮನದಲ್ಲಿ ಬಾಬು ಜಗಜೀವನ್ ರಾಮ್ ಚಿರಸ್ಥಾಯಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ 36 ನೇ ಪುಣ್ಯ ತಿಥಿಯಂದು ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಾಬು ಜಗಜೀವನ್ ರಾಮ್ ಅವರದ್ದು ಆದರ್ಶದ ಜೀವನ. ಕಡುಬಡತನದಿಂದ ಬಂದರೂ ಸ್ವಂತ ಶಕ್ತಿಯ ಮೇಲೆ ದೇಶದ ಉಪಪ್ರಧಾನಿ ಹುದ್ದೆಯವರೆಗೂ ಏರಿ ಉತ್ತಮ ಕೆಲಸ ಮಾಡಿದವರು. ದೀನ ದಲಿತರ ದನಿಯಾಗಿ ನಿರಂತರ ಹೋರಾಟ ಮಾಡಿದವರು. ಡಾ. ಬಿ.ಆರ್.ಅಂಬೇಡ್ಕರ್ ಅವರ ನಂತರ ದೀನದಲಿತರ ಧ್ವನಿಯಾಗಿ, ಅವರ ಆಸೆ, ಆಕಾಂಕ್ಷೆಗಳನ್ನು, ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಮುನ್ನಡೆಸಿದರು. ಅವರಿಗೆ ಇಡೀ ದೇಶ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಿದೆ ಎಂದರು.
ಹಸಿರು ಕ್ರಾಂತಿಯ ಹರಿಕಾರರು: ಹತ್ತು ಹಲವು ಹುದ್ದೆಗಲ್ಲಿ ಕೆಲಸ ಮಾಡಿದ್ದಾರೆ. ಹಸಿರು ಕ್ರಾಂತಿಯ ಹರಿಕಾರರು. ದೇಶ ಆಹಾರಕ್ಕಾಗಿ ಪರಾವಲಂಬಿಯಾಗಿದ್ದ ಸಂದರ್ಭದಲ್ಲಿ ಹಸಿರು ಕ್ರಾಂತಿ ಮಾಡಿ ಇಡೀ ದೇಶಕ್ಕೆ ಆಹಾರ ಭದ್ರತೆ ಯನ್ನು ತಂದುಕೊಟ್ಟವರು ಬಾಬು ಜಗಜೀವನ್ ರಾಮ್ ಅವರು ಎಂದರು.
ಯಾವ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯೋ ಅದು ಮಾತ್ರ ಸ್ವಾಭಿಮಾನಿ ದೇಶವಾಗಲು ಸಾಧ್ಯ. ಅಂಥ ಮಹಾನ್ ಕೆಲವನ್ನು ಅವರು ಮಾಡಿದ್ದಾರೆ. ರಕ್ಷಣಾ ಮತ್ತು ಇತರ ಇಲಾಖೆಗಳ ಸಚಿವರಾಗಿ, ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರು ನಮಗೆ ಪ್ರೇರಣೆ. ಹಲವಾರು ವಿಚಾರಗಳಲ್ಲಿ ಅವರ ಪ್ರೇರಣೆ ಪಡೆದು ಮುಂದೆ ಸಾಗುತ್ತಿದ್ದೇವೆ. ಅವರಿಗೆ ಇಡೀ ಕರ್ನಾಟಕದ ಪರವಾಗಿ ಬಾಬಂಜಗಜೀವನ್ ರಾಮ್ ಅವರಿಗೆ ಗೌರವ ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಎಚ್ ಆಂಜನೇಯ ಮತ್ತು ಇತರರು ಉಪಸ್ಥಿತರಿದ್ದರು.