ಪಾಟ್ನಾ:
ಜನ ವಿಶ್ವಾಸ ಯಾತ್ರೆ ವೇಳೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿ ಹಲವರಿಗೆ ಗಾಯಗಳಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಅಪಘಾತದಲ್ಲಿ ಬೆಂಗಾವಲು ವಾಹನದ ಚಾಲಕ ಮೊಹಮ್ಮದ್ ಹಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸರ ಸೇರಿ 6 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಗರಿಕರು ಗಾಯಗೊಂಡಿದ್ದು, ಎಲ್ಲಾ 10 ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಎಂಸಿಹೆಚ್ ಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತೇಜಸ್ವಿ ಯಾದವ್ ಅವರು ರಾಜ್ಯಾದ್ಯಂತ ‘ಜನ್ ವಿಶ್ವಾಸ್ ಯಾತ್ರೆ’ಯಲ್ಲಿ ತೊಡಗಿಸಿಕೊಂಡಿದ್ದು, ಈ ಜನ ವಿಶ್ವಾಸ ಯಾತ್ರೆಯ ವೇಳೆ ತೇಜಸ್ವಿ ಯಾದವ್ ಅವರ ಬೆಂಗಾವಲು ಪಡೆ ಪುರ್ನಿಯಾದ ಬೆಲೌರಿ ಮೂಲಕ ಹಾದು ಹೋಗುತ್ತಿತ್ತು ಎಂದು ಹೇಳಲಾಗಿದೆ.
ಈ ಬೆಂಗಾವಲು ಪಡೆಯಲ್ಲಿ ಈ ಸ್ಕೌಟ್ ವಾಹನವೂ ಸೇರಿತ್ತು. ಪೂರ್ಣಿಯಾ ಕತಿಹಾರ್ ನಾಲ್ಕು ಪಥದ ರಸ್ತೆಯಲ್ಲಿ ವಾಹನ ರಾಂಗ್ ಸೈಡ್ ಗೆ ಹೋಗಿತ್ತು. ಇದರಿಂದಾಗಿ ಕತಿಹಾರ್ ಕಡೆಯಿಂದ ಬರುತ್ತಿದ್ದ ಕೆಂಪು ಬಣ್ಣದ ಕಾರಿಗೆ ಭೀಕರ ಡಿಕ್ಕಿ ಸಂಭವಿಸಿದೆ.