ದೇಶದಲ್ಲಿನ ಜಾತಿ ವ್ಯವಸ್ಥೆ ಮತ್ತಷ್ಟು ಗಟ್ಟಿ: ಗೃಹ ಸಚಿವ ಡಾ. ಜಿ.ಪರಮೇಶ್ವರ

ಬೆಂಗಳೂರು 

    ದೇಶದಲ್ಲಿನ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾವಿರಾರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರು, ಜಾತಿವ್ಯವಸ್ಥೆ ಮತ್ತಷ್ಟು ಗಟ್ಟಿಯಾಗುತ್ತಿರುವುದು ವಿಷಾದಕರ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಹೇಳಿದರು.

   ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ರಾಜ್ಯ ಸವಿತಾ ಕಲಾ ಸಂಘ ಆಯೋಜಿಸಿದ್ದ “ರಾಜ್ಯ ಮಟ್ಟದ ಸವಿತಾ ಕಲಾ ಸಮ್ಮೇಳನ” ಹಾಗೂ “ಬಿಹಾರದ ಮಾಜಿ ಮುಖ್ಯಮಂತ್ರಿ ಭಾರತ ರತ್ನ ದಿ.ಕರ್ಪೂರಿ ಠಾಕೂರ್ ಅವರಿಗೆ ಗೌರವ ಸಮರ್ಪಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪಾಶ್ಚ್ಯಾತರು ದೇಶಕ್ಕೆ ಬಂದಾಗ ಇಲ್ಲಿನ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಮಟ್ಟಕ್ಕೆ ತಲುಪಿದ್ದೇವೆ. ವೃತ್ತಿ ಆಧಾರದ ಮೇಲೆ ಜಾತಿ ಮಾಡಲಾಗಿದೆ. ಆದರೆ, ಮನುಷ್ಯನ ಹುಟ್ಟನ್ನು ಜಾತಿಯಿಂದ ಅಳೆಯಲಾಗುತ್ತಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣಬೇಕು ಎಂದರು.

    ಸವಿತಾ ಸಮಾಜದವರು ಉದ್ಯಮ ಮಾಡಲು ಆಸ್ತಿ‌ ಇಲ್ಲ, ಕೃಷಿ ಚಟುವಟಿಕೆಗೆ ಜಮೀನು ಇಲ್ಲ. ವೃತ್ತಿಯನ್ನೇ ಆಧರಿಸಿ ಬದುಕು ಸಾಗಿಸುತ್ತಿದ್ದಾರೆ. ವೃತ್ತಿಯಲ್ಲಿ ಹೊಸತನ ಕಂಡುಕೊಳ್ಳುತ್ತಿದ್ದು ಶೋಷಿತರಲ್ಲಿ ಶೋಷಿತ ಸಮುದಾಯವಾಗಿದೆ. ಸಮಾಜದಲ್ಲಿ ಕುಹಕಕ್ಕೆ ಒಳಗಾಗುತ್ತಿದ್ದಾರೆ. ಇದು ಸರಿಯಲ್ಲ, ಎಲ್ಲರಂತೆಯೇ ಅವರು ಎಂದು ಹೇಳುವವರು ಎಲ್ಲೂ ಇಲ್ಲ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಂಬುದನ್ನು ಬಾಯಿ ಮಾತಿಗೆ ಸೀಮಿತಗೊಳಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಸರ್ಕಾರದ ಸವಲತ್ತು ಮತ್ತು ಅವಕಾಶಗಳಿಂದ ವಂಚಿತರಾದವರ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಲು ಜಾತಿಗಣತಿ ನಡೆಸಲಾಗಿದೆ. ಇದಕ್ಕೆ ಸರ್ಕಾರವು 168 ಕೋಟಿ ರೂ. ಖರ್ಚು ಮಾಡಿದೆ. ಹಿಂದುಳಿದವರಿಗೆ ವಿಶೇಷ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ವರದಿ ಸಹಕಾರಿಯಾಗಲಿದೆ. ವರದಿ ಸರ್ಕಾರದ ಕೈಸೇರುವ ಮುಂಚೆಯೇ ವಿರೋಧ ಮಾಡುವುದು ಸರಿಯಲ್ಲ ಎಂದರು.

    2ಎ ವರ್ಗದಲ್ಲಿರುವ ಸವಿತಾ ಸಮುದಾಯ 114 ಜಾತಿಗಳ ನಡುವೆ ಕಳೆದುಹೋಗಿದೆ. ಸಮುದಾಯವನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮೇಲೆತ್ತಲು 1ಬಿ ವರ್ಗಕ್ಕೆ ಸೇರಿಸಲು, ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಅನುದಾನ ನೀಡುವ ಬೇಡಿಕೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು. ಸಮುದಾಯದ ಪ್ರತಿಭಾವಂತರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗುವುದು ಎಂದು ಹೇಳಿದರು.

    ಬಿಹಾರದ ಮಾಜಿ ಮುಖ್ಯಮಂತ್ರಿ ದಿ.ಕರ್ಪೂರಿ ರಾಠೋಡ್ ಅವರು ದೇಶದಲ್ಲಿನ ಮುಖ್ಯಮಂತ್ರಿಗಳಲ್ಲಿ ಮಾದರಿಯಾಗಿ ಸೇವೆ ಸಲ್ಲಿಸಿದವರು‌. ಸಾಮಾಜಿಕ ನ್ಯಾಯ ಸಿಗಬೇಕೆಂದು ಹೋರಾಟ ನಡೆಸಿದ ಅವರಿಗೆ ಭಾರತ ರತ್ನ ಕೊಟ್ಟಿರುವುದು ಸಂತಸದ ವಿಚಾರ. ರಾಜಕೀಯ ಉದ್ದೇಶದಿಂದ ಭಾರತ ರತ್ನ ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿಯೇ ಭಾರತರತ್ನ ನೀಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

   ಕಾರ್ಯಕ್ರಮದಲ್ಲಿ ಕುಂಚೂರಿನ ಸವಿತಾ ಪೀಠದ ಸವಿತಾನಂದ ಸ್ವಾಮೀಜಿ, ಮುಖ್ಯಮಂತ್ರಿಯವರ ಸಲಹೆಗಾರ ಬಿ.ಆರ್.ಪಾಟೀಲ್, ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಜಮೀರ್ ಅಹ್ಮದ್ ಖಾನ್, ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜೈಪ್ರಕಾಶ್ ಹೆಗಡೆ ಅವರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap