ಇದೀಗ ನಮ್ಮ ಕ್ಲಿನಿಕ್ಗಳನ್ನ ಸಂಜೆ ಕ್ಲಿನಿಕ್ ಮಾದರಿಯಲ್ಲಿ ಸಮಯ ಬದಲಾಯಿಸಲು ನಿರ್ಧರಿಸಲಾಗಿದ್ದು, 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಕಾರ್ಯ ನಿರ್ವಹಿಸುವಂತೆ ತಯಾರಿ ನಡೆಸಲಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವ ಸಮಯ ಹಾಗೂ ನಮ್ಮ ಕ್ಲಿನಿಕ್ಗಳ ಸಮಯ ಎರಡು ಕೂಡ ಒಂದೇ ಆಗುತ್ತಿತ್ತು.
ಇದರಿಂದ ಬಡವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ರಾತ್ರಿಯ ವರೆಗೂ ನಮ್ಮ ಕ್ಲಿನಿಕ್ ಗಳು ಕಾರ್ಯ ನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದರು.
ರಾತ್ರಿವರೆಗೂ ಕಾರ್ಯ ನಿರ್ವಹಿಸಬೇಕಾದರೆ ಎರಡು ಶಿಫ್ಟ್ ಮಾಡಬೇಕಾಗಬಹುದು. ಆಗ ಹೆಚ್ಚಿನ ವೈದ್ಯರು ಬೇಕಾಗುತ್ತಾರೆ. ಈಗಾಗಲೇ ವೈದ್ಯರ ಕೊರತೆಯಿದೆ ಎಂಬ ವಾದಗಳು ಕೂಡಾ ಕೇಳಿ ಬಂದಿದ್ದವು. ಅಂತಿಮವಾಗಿ ಎರಡು ಶಿಫ್ಟ್ ಮಾಡುವ ಬದಲು ಒಂದೇ ಶಿಫ್ಟ್’ನಲ್ಲಿ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು.
ಬೆಳಗ್ಗೆ 7 ಗಂಟೆಗೆ ನಮ್ಮ ಕ್ಲಿನಿಕ್ಗಳು ತೆರೆಯ ಲಿದ್ದು, ಬೆಳಗ್ಗೆ ಹೊತ್ತಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಮಾತ್ರ ಇರುತ್ತಾರೆ. ಬಳಿಕ 12 ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ
ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಶೇ.25 ರಷ್ಟು ಕ್ಲಿನಿಕ್ಗಳನ್ನು ಪ್ರಾಯೋಗಿಕ ಹಂತದಲ್ಲಿ ಸಂಜೆ ಕ್ಲಿನಿಕ್ಗಳಾಗಿ ಸಮಯ ಬದಲಾವಣೆ ಮಾಡಲಾಗುತ್ತಿದೆ. ಇವುಗಳ ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲಾ ನಮ್ಮ ಕ್ಲಿನಿಕ್ಗಳ ಸಮಯವನ್ನು ಬದಲಾವಣೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಸಂಜೆ ವೇಳೆ ನಮ್ಮ ಕ್ಲಿನಿಕ್ಗಳಲ್ಲಿ ಒಪಿಡಿ ತೆರೆಯುವುದರಿಂದ ಸಾಕಷ್ಟು ಅನುಕೂಲ ಕೂಡ ಆಗಲಿದೆ. ಹೀಗೆ ಆಗುವ ಬದಲಾವಣೆಯಿಂದ ಜನರಿಗೆ ಅನುಕೂಲ ಆಗುತ್ತದೆಯೇ, ಜನ ಈ ಯೋಜನೆಯ ಫಲಾನುಭವಿ ಗಳಾಗುತ್ತ್ತಾರಾ ಎಂದು ಕಾದು ನೋಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸಕ್ತಿ ತೋರಿದ್ದಾರೆ. ಬಳಿಕ ಹಂತ ಹಂತವಾಗಿ ನಮ್ಮ ಕ್ಲಿನಿಕ್ಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ.