ನಾಳೆಯಿಂದ ಕಬ್ಬನ್ ಪಾರ್ಕಿಗೆ ಸಾಕು ನಾಯಿಗಳ ಪ್ರವೇಶ ನಿಷೇಧಿಸಲು ಚಿಂತನೆ

ಬೆಂಗಳೂರು : ಕಬ್ಬನ್ ಪಾರ್ಕಿನಲ್ಲಿ ಸಾಕು ನಾಯಿಗಳ ಪ್ರವೇಶವನ್ನು ಜುಲೈ 1 ರಿಂದ ಸಂಪೂರ್ಣ ನಿಷೇಧಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

ನಾಯಿಗಳು ಪದೇ ಪದೇ ತೊಂದರೆ ನೀಡುತ್ತಿರುವ ಬಗ್ಗೆ ವಾಯು ವಿಹಾರಿಗಳಿಂದ ದೂರುಗಳು ಸಲ್ಲಿಕೆಯಾಗಿದ್ದು, ಇದರಿಂದ ತಿಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಗೆ ಈ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಉಗ್ರ ಸ್ವರೂಪದ ನಾಯಿಗಳನ್ನು ಕರೆ ತರುವಂತಿಲ್ಲ. ಇತರೆ ಸಾಕು ನಾಯಿಗಳನ್ನು ತಂದರೂ ಅದಕ್ಕೆ ಆರು ಮೀಟರ್ ಗೂ ಹೆಚ್ಚು ಉದ್ದದ ಬೆಲ್ಟ್ (ಚೈನ್) ಹಾಕಿರಬೇಕು. ನಾಯಿಯ ಜತೆಗೆ ಸ್ಕೂಪ್ (ಶ್ವಾನದ ಮಲವನ್ನು ಸ್ಕೂಪ್ ನಲ್ಲಿ ವಿಲೇವಾರಿ ಮಾಡಬೇಕು) ಕೂಡ ತರಬೇಕು ಎಂಬುದೂ ಸೇರಿದಂತೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಈ ಹಿಂದೆ ಆದೇಶ ಹೊರಡಿಸಿ ಸಾಕು ನಾಯಿಗಳನ್ನು ಉದ್ಯಾನಕ್ಕೆ ಬಿಡಲಾಗುತ್ತಿತ್ತು.

ಆದರೆ, ಶ್ವಾನ ಮಾಲೀಕರು ಉದ್ಯಾನದೊಳಗೆ ಪ್ರವೇಶಿಸಿದ ಕೂಡಲೇ ಶ್ವಾನದ ಬೆಲ್ಟ್ ತೆಗೆಯುವುದು, ಮಲ ವಿಸರ್ಜಿಸಿದರೂ ತೆರವುಗೊಳಿಸದಿರುವುದೂ ಸೇರಿದಂತೆ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ನಿತ್ಯ ಈ ಬಗ್ಗೆ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಶ್ವಾನಗಳ ಪ್ರವೇಶ ನಿಷೆ?ಧಿಸಲು ಚರ್ಚಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್. ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ಜುಲೈ 1 ರಿಂದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗುವುದು ಮತ್ತು ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ, ಸರಕಾರದ ಗಮನಕ್ಕೆ ತಂದು ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ ಸಾಕು ನಾಯಿಗಳನ್ನು ಸಾಕುವವರು ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡದಂತೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡುವ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಬಗ್ಗೆ ‘ನೋ ಪೆಟ್ ಬ್ಯಾನ್ ಇನ್ ಕಬ್ಬನ್ ಪಾರ್ಕ್ ಫಾರ್ ಡಾಗ್ಸ್ ಸೇಕ್’ ಎಂಬ ಮನವಿಗೆ ಈಗಾಗಲೇ 1,500 ಕ್ಕೂ ಹೆಚ್ಚು ಸಾಕು ಪ್ರಾಣಿ ಪ್ರಿಯರ ಬೆಂಬಲ ಸಿಕ್ಕಿದೆ.

ವಾಯು ವಿಹಾರಿಗಳಿಂದ ನಿಷೇಧಕ್ಕೆ ಬೆಂಬಲ : ‘ಹುಲ್ಲು ಹಾಸು ಪ್ರದೇಶದಲ್ಲಿ ನಾಯಿಗಳು ಮಲ ವಿಸರ್ಜಿಸುತ್ತವೆ. ಅದರಲ್ಲಿ ಹುಳಗಳಿರುತ್ತವೆ. ಆ ಹುಳುಗಳಿಂದ ಸೋಂಕು ಹರಡುತ್ತದೆ. ಇದರಿಂದಾಗಿ ಹುಲ್ಲು ಹಾಸಿನ ಮೇಲೆ ನಡೆಯಲು, ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಪ್ರವಾಸಿಗರು ದೂರುಗಳಲ್ಲಿ ತಿಳಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಶೇ. 70ಕ್ಕೂ ಹೆಚ್ಚು ವಾಯು ವಿಹಾರಿಗಳು ನಾಯಿಗಳ ನಿಷೇಧ ಬೆಂಬಲಿಸಿದ್ದಾರೆ ಮತ್ತು ಸಮಿತಿಗೆ ದೂರುಗಳನ್ನು ಸಲ್ಲಿಸಿದ್ದಾರೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಸಾಕು ನಾಯಿಗಳ ಮಾಲೀಕರಿಗೆ ದಂಡ ಹಾಕುವ ನಿಯಮ ನಮ್ಮಲ್ಲಿ ಜಾರಿ ಇಲ್ಲ. ಅವರನ್ನು ಶಿಕ್ಷಿಸುವ ಅಧಿಕಾರ ಇಲ್ಲ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಮುಖಾಂಶಗಳು :

ಜುಲೈ 1 ರಿಂದ ಪ್ರವೇಶ ದ್ವಾರಗಳಲ್ಲಿ ಬ್ಯಾನರ್ ಅಳವಡಿಕೆ

ವಾಯು ವಿಹಾರಿಗಳಿಂದ ದೂರು ಕೇಳಿ ಬಂದ ಹಿನ್ನೆಲೆ ಕ್ರಮ

ತೋಟಗಾರಿಕೆ ಇಲಾಖೆಯಿಂದ ಚಿಂತನೆ

Recent Articles

spot_img

Related Stories

Share via
Copy link
Powered by Social Snap