ಪಾವಗಡ :-
ಚಿತ್ರದುರ್ಗದ ಯೋಗಬ್ರಹ್ಮ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಬಾನುವಾರ ತಾಲ್ಲೂಕಿನ ಐತಿಹಾಸಿಕ ಸ್ಥಳವಾದ ನಿಡಗಲ್ ದುರ್ಗದಲ್ಲಿ ಮೂರು ದಿನಗಳ ಕಾಲ ನಿತ್ಯ ಸಮಾಧಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಗುರೂಜಿ ಚಂದ್ರಚೇಖರ್ ಮೇಟಿಯವರು ಶಿಬಿರಕ್ಕೆ ಚಾಲನೆ ನೀಡಿದರು.
ಗುರೂಜಿ ಚಂದ್ರಚೇಖರ್ ಮೇಟಿಯವರು ಮಾತನಾಡಿ ಹತ್ತು ದಿನಗಳ ಕಾಲ ಸಿದ್ದಿ ಸಮಾಧಿ ಯೋಗ ಶಿಭಿರವನ್ನು ಈಗಾಗಲೇ ಚಿತ್ರದುರ್ಗದಲ್ಲಿ ಮುಗಿಸಿದ್ದೇವೆ, ಮೂರು ದಿನಗಳ ಕಾಲದ ನಿತ್ಯ ಸಮಾಧಿ ಯೋಗ ಶಿಬಿರವನ್ನು ಪಾವಗಡ ತಾಲ್ಲೂಕಿನ ನಿಡಗಲ್ ದುರ್ಗದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಪಂಚಕೋಶ ಶುದ್ದಿ, ವ್ಯಕ್ತಿತ್ವ ವಿಕಾಸಕ್ಕಾಗಿ ಯೋಗದ ತರಬೇತಿಯನ್ನು ನೀಡಲಾಗುವುದು, ಮತ್ತು ಈ ಶಿಬಿರದ ಯೋಗ ತರಬೇತಿಯಿಂದ ಒತ್ತಡರಹಿತ ಮನಸ್ಸು, ಆರೋಗ್ಯಕರವಾದ ನಿದ್ದೆ, ಉತ್ಸಾಹ ಮತ್ತು ಸಂತೋಷ, ಮಾನಸಿಕ ಖಿನ್ನತೆ ಮತ್ತು ಆತಂಕಗಳಿಂದ ಮುಕ್ತಿ, ಅಧಿಕ ತೂಕ ನಿಯಂತ್ರಣ, ಏಕಾಗ್ರತೆ, ಸಮಯ ಪ್ರಜ್ಞೆ, ಕೋಪದ ನಿಗ್ರಹ ಮತ್ತು ಆತ್ಮ ವಿಶ್ವಾಸವನ್ನು ಗಳಿಸುವ ಪ್ರಯೋಜನಗಳನ್ನು ಈ ಶಿಬಿರದ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ.
ಶಿಬಿರದಲ್ಲಿ ಹದಿಮೂರು ವರ್ಷಕ್ಕೂ ಮೇಲ್ಪಟ್ಟ ಸ್ತ್ರೀ ಮತ್ತು ಪುರುಷರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸುಮಾ ಮೇಟಿ, ಲೋಕೇಶ್, ಶಿವು ಯಾದವ್, ಮಂಜುನಾಥ ರೆಡ್ಡಿ, ಹನುಮಂತರಾಯ, ವಿಶ್ವನಾಥ್, ಮಹಬಲೇಶ್ವರಪ್ಪ ಮತ್ತು ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
