ನ್ಯಾಯಾಂಗದ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಸಂದೇಶಗಳಿಗೆ ಬಿಜೆಪಿ ನಾಯಕರ ಬೆಂಬಲವಿದೆ ಎಂದ ಅಭಿಷೇಕ್ ಮನು ಸಿಂಘ್ವಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ದಾಳಿ ಕಾಕತಾಳಿಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ಮನು ಸಿಂಘ್ವಿ ಮಾತನಾಡಿದರು.

ನ್ಯಾಯಾಂಗದ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಮಾಡುವ ಸಂದೇಶಗಳನ್ನು ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಪ್ರೋತ್ಸಾಹವಿದೆ. ಹಾಗೂ ಈ ಅಭಿಯಾನದ ಹಿಂದೆ ನ್ಯಾಯಾಂಗದ ನೈತಿಕಸ್ಥೈರ್ಯ ಕುಗ್ಗಿಸಿ ಒತ್ತಡ ಹೇರುವ ಹಾಗೂ ಬೆದರಿಸುವ ಉದ್ದೇಶ ಅಡಗಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರವು ಆಡಳಿತ ವೈಫಲ್ಯ, ದೇಶದ ನಾಗರೀಕರು ಹಾಗೂ ಎಲ್ಲ ವರ್ಗದಿಂದ ಪ್ರತಿರೋಧ ಎದುರಿಸುತ್ತಿದೆ. ನಿರುದ್ಯೋಗ, ಹಣದುಬ್ಬರ, ಸಾಮಾಜಿಕ ಹೋರಾಟ ವಿಚಾರಗಳಿಂದ ದಿನನಿತ್ಯ ಉದ್ಭವಿಸುತ್ತಿರುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು, ಅವಿತುಕೊಳ್ಳಲು ಮೋದಿ ಸರ್ಕಾರ ಇಂತಹ ನೀಚ ಅಭಿಯಾನಗಳನ್ನು ನಡೆಸುತ್ತಿದೆ. ಇತ್ತೀಚಿನ ಬೆಳವಣಿಗೆಗಳು ಬಿಜೆಪಿ ಪಾಲಿಗೆ ಅನುಕೂಲಕರವಾಗಿಲ್ಲ. ಉದಯಪುರದಲ್ಲಿನ ಹತ್ಯೆ ಪ್ರಕರಣದಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿತ್ತು, ಆದರೆ ಹಂತಕರು ಬಿಜೆಪಿಯ ಸದಸ್ಯರು ಎಂಬ ವಿಚಾರ ಬೆಳಕಿಗೆ ಬಂದಿತು. ಇನ್ನು ಕಾಶ್ಮೀರದಲ್ಲಿ ಕುಖ್ಯಾತ ಲಷ್ಕರ್ ಉಗ್ರಗಾಮಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಎಂಬುದು ಬೆಳಕಿಗೆ ಬಂದಿದೆ. ಇದೆಲ್ಲದರ ಮಧ್ಯೆ ಬಿಜೆಪಿ ಸರ್ಕಾರ ತನ್ನ ವಫಲ್ಯ ಮುಚ್ಚಿಕೊಳ್ಳಲು ನಕಲಿ ರಾಷ್ಟ್ರೀಯತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬಿಜೆಪಿಯ ಪರ ಪ್ರಚಾರ ಮಾಡುವ ಮಾಧ್ಯಮವೊಂದು ರಾಹುಲ್ ಗಾಂಧಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ತೇಜೋವಧೆಗೆ ಇಳಿದಿದ್ದು, ಬಿಜೆಪಿ ನಾಯಕರು ಪ್ರಕಟಿಸಿದ್ದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ವಾಹಿನಿ ರಾಹುಲ್ ಗಾಂಧಿ ಅವರು ಕೇರಳದ ಗಲಭೆ ವಿಚಾರವಾಗಿ ನೀಡಿದ ಹೇಳಿಕೆಯನ್ನು, ಉದಯಪುರ ಗಲಭೆ ವಿಚಾರವಾಗಿ ನೀಡಿದ ಹೇಳಿಕೆ ಎಂದು ಉದ್ದೇಶಪೂರ್ವಕವಾಗಿ ಬಿಜೆಪಿಯು ತಿರುಚಿದ ಸುಳ್ಳು ಸುದ್ದಿ ಪ್ರಕಟಿಸಿದೆ, ಆ ವಾಹಿನಿ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಆ ವಾಹಿನಿ ಕ್ಷಮೆಯಾಚಿಸಬೇಕಾಯಿತು ಎಂದರು.

ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಾಗ ನ್ಯಾಯಾಲಯಕ್ಕೆ ಬಿಜೆಪಿ ಜೈಕಾರ ಹಾಕಿತ್ತು. ಆದರೆ ಉದಯಪುರ ಗಲಭೆ ಹಿಂದೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನುಪುರ್ ಶರ್ಮಾ ಅವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿತು. ನುಪುರ್ ಶರ್ಮಾ ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದಾಗ ಆ ಅರ್ಜಿಯನ್ನು ತಿರಸ್ಕರಿಸಿದ ಪೀಠವು ಅದಕ್ಕೆ ಸೂಕ್ತ ಕಾರಣವನ್ನು ತಿಳಿಸಿತ್ತು. ಅದು ಆ ಪೀಠದ ಹಕ್ಕು ಕೂಡ ಆಗಿದೆ. ಈ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಸರ್ಕಾರದ ನಡೆ ಏನಾಗಬಾಕಿತ್ತು? ಜವಾಬ್ದಾರಿಯುತ ಪಕ್ಷ ಏನು ಮಾಡಬೇಕಿತ್ತು? ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಪ್ರಾಮಾಣಿಕ ಹಾಗೂ ನೇರ ನುಡಿಯಲ್ಲಿ ಟೀಕಿಸಿದಾಗ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ ಬಿಜೆಪಿ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ನಿಮಿಷ ದ್ವೇಷಪೂರಿತ ಸಂದೇಶಗಳನ್ನು ಪ್ರಕಟಿಸುವಾಗ ಬಿಜೆಪಿಗೆ ಈ ಲಕ್ಷ್ಮಣ ರೇಖೆ ನೆನಪಾಗಲಿಲ್ಲವೇಕೆ? ಕಾರಣ ಇದರ ಹಿಂದೆ ಪ್ರಧಾನಮಂತ್ರಿಗಳ ಕಚೇರಿಯ ಕೃಪಾಪೆÇೀಷಣೆ ಇತ್ತು. ಇದಿಷ್ಟೇ ಅಲ್ಲ, ಈಗ ಕರ್ನಾಟಕ ರಾಜ್ಯದ ಹೈಕೋರ್ಟ್ ನ ಹಿರಿಯ ನ್ಯಾಯಧೀಶರು ತಮ್ಮ ಮೇಲೆ ವರ್ಗಾವಣೆ ಬೆದರಿಕೆ ಒತ್ತಡ ಇದ್ದು, ನಾನು ಕೇವಲ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದ್ದೇನೆ ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. 2014ರ ನಂತರ ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಣದ ಶಕ್ತಿಗಳು ಈ ರೀತಿ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ತ್ ಸದಸ್ಯ ಸಲೀಂ ಅಹ್ಮದ್, ಬಿ.ಎಲ್ ಶಂಕರ್, ಸುದರ್ಶನ್, ದಿನೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಮುಖ ಅಂಶಗಳು :

ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಈ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವಂತೆ ಕೋರಲಾಗಿದೆ.

ಕಾಂಗ್ರೆಸ್ ಪಕ್ಷ ಬಿಜೆಪಿಗೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತದೆ.

ನೂರು ಕೋಟಿ ಧ್ವನಿಗಳಿರುವ ದೇಶದಲ್ಲಿ ಬಿಜೆಪಿ ಎಷ್ಟು ಧ್ವನಿಗಳನ್ನು ಅಡಗಿಸಲು ಸಾಧ್ಯ?

ಸಂವಿಧಾನದ ಮೇಲೆ ಕಟ್ಟಲಾಗಿರುವ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಎಷ್ಟು ಸಂಸ್ಥೆಗಳನ್ನು ನಾಶಪಡಿಸಲಿದೆ?

ಬಿಜೆಪಿಯ ದುರಾಡಳಿತ ಹಾಗೂ ವೈಫಲ್ಯ ಎದುರಿಸುತ್ತಿರುವ ದೇಶದಲ್ಲಿ ಬಿಜೆಪಿ ಎಷ್ಟು ದಿನಗಳ ಕಾಲ ಇಂತಹ ವಿಭಜನೆಯ ಅಭಿಯಾನಗಳ ಹಿಂದೆ ಅವಿತುಕೊಳ್ಳಲಿದೆ?

Recent Articles

spot_img

Related Stories

Share via
Copy link
Powered by Social Snap