ಬೆಂಗಳೂರು:
ಪ್ರಗತಿಪರ ಸಾಹಿತಿಗಳಿಗೆ ಪದೇ ಪದೇ ಬೆದರಿಕೆ ದೂರುಗಳ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ನಗರ ಕೇಂದ್ರ ಅಪರಾಧ ವಿಭಾಗಕ್ಕೆ ಪೊಲೀಸ್ ಇಲಾಖೆ ವರ್ಗಾಯಿಸಿದೆ. ಪ್ರಕರಣದ ಮೇಲ್ವಿಚಾರಣೆ ಮತ್ತು ತನಿಖೆಗೆ ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಪ್ರಗತಿಪರ ಸಾಹಿತಿಗಳ ನಿಯೋಗ ಆ.23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕಳವಳ ವ್ಯಕ್ತಪಡಿಸಿತ್ತು. ಈ ಸಂಬಂಧ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಮತ್ತು ಸಂಬಂಧಿಸಿದ ಡಿಸಿಪಿ ಅವರು ಪ್ರತಿದಿನವೂ ಪ್ರಕರಣಗಳನ್ನು ಪರಿಶೀಲಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಹಲವು ಬರಹಗಾರರಿಗೆ ಬೆದರಿಕೆ ಪತ್ರಗಳು ಬಂದಿದ್ದು, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.