ಪ್ರತಿಭಟನಾ ನಿರತರ ಮೇಲೆ ಪೊಲೀಸರಿಂದ ಅಶ್ರವಾಯು ಪ್ರಯೋಗ….!

ನವದೆಹಲಿ :

    ರೈತರ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ಅಶ್ರುವಾಯುವನ್ನು ಸಿಡಿಸಿದ್ದಾರೆ. ದೆಹಲಿ-ಹರಿಯಾಣದ ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ತಡೆಯೊಡ್ಡಲಾಗಿದೆ. ಇದರಿಂದ ಬ್ಯಾರಿಕೇಡ್‌ಗಳನ್ನು ತಳ್ಳಲು ಮುಂದಾದ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಸಿಡಿಸಿದ್ದಾರೆ.

    ಅಶ್ರುವಾಯು ಸಿಡಿಸುತ್ತಿದ್ದಂತೆ ಸ್ಥಳದಿಂದ ರೈತರು ಓಡಿಹೋಗುವುದು ಕಂಡು ಬಂದಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನ್ನದಾತರು ಇಂದು ದೆಹಲಿ ಚಲೋ ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ನೇಗಿಲುದಾತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

    ದೆಹಲಿಯನ್ನು ಪ್ರವೇಶಿಸುವ ಗಡಿಭಾಗಗಳಲ್ಲಿ ಪೊಲೀಸರು ರೈತರನ್ನು ತಡೆಯಲು ಬ್ಯಾರಿಕೇಡ್‌ಗಳ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಇದನ್ನು ಭೇದಿಸಿ ಬರುವ ರೈತರನ್ನು ಹಿಂದಿಕ್ಕಲು ಅಶ್ರುವಾಯು ಅಸ್ತ್ರವನ್ನು ಬಳಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜಧಾನಿಯ ದೆಹಲಿಯ ಗಡಿಯಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.

    ದೆಹಲಿಯ ಸಿಂಘು, ಘಾಜಿಪುರ್‌ ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧಿಸಿ, ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರತಿಭಟನಾಕಾರರು ಬರುವ ವಾಹನಗಳು ನಗರವನ್ನು ಪ್ರವೇಶಿಸದಂತೆ ತಡೆಯಲು ಕಾಂಕ್ರಿಟ್‌ ತಡೆಗೋಡೆ ಮತ್ತು ಕಬ್ಬಿಣದ ಮೊಳೆಗಳನ್ನು ರಸ್ತೆಗಳಲ್ಲಿ ಅಳವಡಿಸಲಾಗಿದೆ. ಈಗಾಗಲೇ ಬಿಡುಗಡೆ ಮಾಡಲಾಗಿರುವ ಸಂಚಾರ ಮಾರ್ಗಸೂಚಿ ಪ್ರಕಾರ, ಸಿಂಘು ಗಡಿಯಲ್ಲಿ ವಾಣಿಜ್ಯ ವಾಹನಗಳ ಸಂಚಾರದ ಮೇಲೆ ಸೋಮವಾರದಿಂದಲೇ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ಮಂಗಳವಾರ ಎಲ್ಲ ಮಾದರಿಯ ವಾಹನಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

    ಸುಮಾರು 5,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಸ್ತೆ ಬಂದ್‌ ಮಾಡುವುದಕ್ಕೆ ದೊಡ್ಡದೊಡ್ಡ ಕಂಟೇನರ್‌ಗಳನ್ನು ಮತ್ತು ಕಾಂಕ್ರಿಟ್‌ ತಡೆಗೋಡೆ ಸಾಗಿಸಲು ಕ್ರೇನ್‌ಗಳನ್ನು ನಿಯೋಜಿಸಲಾಗಿದೆ. ರೈತರು ರಾಜಧಾನಿ ಪ್ರವೇಶಿಸದಂತೆ ನೋಡಿಕೊಳ್ಳಲು ಈಗಾಗಲೇ ಬಹುಪದರ ಬ್ಯಾರಿಕೇಡ್‌ಗಳು, ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಶಾನ್ಯ ದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಲ್ಲದೆ ‘ದೆಹಲಿ ಚಲೋ’ ಬೆನ್ನಲ್ಲೆ ಮುಂದಿನ 30 ದಿನಗಳ ಕಾಲ ಇಡೀ ದೆಹಲಿ ನಗರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸೋಮವಾರ ಈ ಆದೇಶ ಹೊರಡಿಸಿದ್ದು, ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ತಕ್ಷಣವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

    ಜೊತೆಗೆ ದೆಹಲಿಯ ಭೌಗೋಳಿಕ ಮಿತಿಗಳಲ್ಲಿ ರಾಜಕೀಯ, ಸಾಮಾಜಿಕ, ಅಥವಾ ಯಾವುದೇ ಇತರ ಉದ್ದೇಶಕ್ಕಾಗಿ ಯಾವುದೇ ಮೆರವಣಿಗೆಗಳು, ಪ್ರದರ್ಶನಗಳು, ರ್ಯಾಲಿಗಳು ಅಥವಾ ಕಾಲ್ನಡಿಗೆಯಲ್ಲಿ ಮೆರವಣಿಗೆ, ಸಮಾವೇಶ, ಅಥವಾ ಭಾಗವಹಿಸುವಿಕೆಯ ಮೇಲೆ ಸಂಪೂರ್ಣ ನಿಷೇಧವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap