ಬಯಲುಸೀಮೆಯ ಬಡವರ ಖರ್ಜೂರ ಈಚಲು ಹಣ್ಣಿಗೆ ಮಕ್ಕಳು ಫಿದಾ..!

ಮರೆಯಾಗುತ್ತಿರುವ ಈಚಲು ಹಣ್ಣು, ಈಚಲು ಹಣ್ಣಿನಿಂದ ವಿವಿಧ ಪರಿಕರಗಳ ತಯಾರಿಕೆ

ಗುಡಿಬಂಡೆ ಭರತ್ ಜಿ.ಎಸ್

ಬೆಂಗಳೂರು: ವಿವಿಧ ಗ್ರಾಮಗಳ ಕೆರೆ ಕಟ್ಟೆ, ಬೆಟ್ಟ- ಗುಡ್ಡಗಳಲ್ಲಿ ಇದೀಗ ಈಚಲು ಹಣ್ಣು ತನ್ನ ಹಳದಿ ಬಣ್ಣದಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಸುಮಾರು ಐದ ರಿಂದ ಹತ್ತು ಅಡಿ ಎತ್ತರದ ಈಚಲು ಗಿಡದಲ್ಲಿ ಹಸಿರೆಲೆಗಳ ಮಧ್ಯೆ ಹಣ್ಣು ಕಂಗೊಳಿಸುತ್ತಿದೆ. ಈ ಈಚಲು ಮರವನ್ನು ಬಯಲು ಸೀಮೆಯ ಖರ್ಜೂರ ಎಂತಲೂ ಕರೆಯುತ್ತಾರೆ.

ಇದು ಖರ್ಜೂರದಂತೆ ತಿನ್ನಲು ಬಲು ರುಚಿ. ಆದರೆ ಖರ್ಜೂರದ ಬೀಜಕ್ಕಿಂತ ದೊಡ್ಡದಾಗಿರುವುದರಿಂದ ಈ ಹಣ್ಣನ್ನು ಚೀಪುತ್ತ ರುಚಿ ಸವಿಯಬಹುದು. ಹಸಿರು ಬಣ್ಣದ ಕಾಯಿ ಹಣ್ಣಾದಂತೆ ಹಳದಿ ಬಣ್ಣಕ್ಕೆ ಪರಿವರ್ತನೆ ಆಗುತ್ತದೆ. ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೆಂಗಿನಮರದ, ಅಡಿಕೆ ಕುಟುಂಬಕ್ಕೆ ಸೇರಿದ ಒಂದು ಜಾತಿ ಮರ. ಇದರಲ್ಲಿ ಐದಾರು ಪ್ರಭೇದಗಳಿವೆ. ಮುಖ್ಯವಾದುವು ಖರ್ಜೂರದ ಮರ ಮತ್ತು ಈಚಲು. ಇವು ಆರ್ಥಿಕ ದೃಷ್ಟಿಯಿಂದಲೂ ಮುಖ್ಯವಾಗಿವೆ. ಈಚಲು ಜಾತಿಯ ಮರಗಳು ನೆಟ್ಟಗೆ ಬೆಳೆಯುತ್ತವೆ. ರೆಂಬೆಗಳಿರುವುದಿಲ್ಲ. ಕಾಂಡ ಒರುಟಾಗಿದ್ದು ಎಲೆಗಳ ತೊಟ್ಟಿನ ತಳಭಾಗಗಳಿಂದ ಮುಚ್ಚಿದೆ. ಒಂದು ಪ್ರಬೇಧದಲ್ಲಿ ಮಾತ್ರ ಕಾಂಡ ನೆಲದೊಳಗಿರುತ್ತದೆ. ಎಲೆಗಳು ಮರದ ತುದಿಯಲ್ಲಿ ಗರಿಯೋಪಾದಿಯಾಗಿ ಹರಡಿರುತ್ತವೆ. ಪ್ರತಿ ಗರಿಯೂ ಒಂದು ಸಂಯುಕ್ತ ಪತ್ರ. ಉಪಪತ್ರಗಳು ಗಡುಸಾಗಿ ಬೂದಿಬಣ್ಣವಾಗಿರುತ್ತದೆ. ತುದಿ ದಬ್ಬಳದ ಮೊನೆಯಂತಿದೆ. ಒಂದು ಪ್ರಭೇದದಲ್ಲಿ ಕಿರು ಎಲೆಗಳು ಹಸುರಾಗಿ ಮೃದುವಾಗಿದ್ದು ಮೊನೆ ಚೂಪಾಗಿರುವುದಿಲ್ಲ.

ಗಡಿ ಭಾಗದ ಆಂದ್ರಪ್ರದೇಶದಲ್ಲಿ ನೀರಾ ಇಳಿಸುವಿಕೆಗೆ ಫೇಮಸ್ : ಮರದ ತುದಿಯ ಒಂದು ಪಾಶ್ರ್ವದಲ್ಲಿನ ಕೆಳಗಿನ ಎಲೆಗಳನ್ನು ಕತ್ತರಿಸಿ ಹಾಕಿ ಅಲ್ಲಿನ ತೊಗಟೆಯನ್ನು ಸುಮಾರು 45 ಸೆಂ. ಮೀ. ಅಗಲದಷ್ಟು ಒಳಗಿನ ಬಿಳಿಯಭಾಗ ಕಾಣುವಂತೆ ತೆಗೆದುಹಾಕುತ್ತಾರೆ. ಕ್ರಮೇಣ ಅದು ಕಂದುಬಣ್ಣಕ್ಕೆ ತಿರುಗುತ್ತದೆ. ಕೆಲವು ದಿನಗಳಾದ ಮೇಲೆ, ಈ ತೆರೆದ ಸ್ಥಳದಲ್ಲಿ ಗಿ ಆಕಾರದಲ್ಲಿ ಗಾಯವನ್ನುಂಟು ಮಾಡಿ ಒಂದಷ್ಟು ಭಾಗವನ್ನು ತೆಗೆದುಹಾಕುತ್ತಾರೆ. ಅದರಿಂದ ರಸ ಸುರಿಯಲು ಪ್ರಾರಂಭವಾಗುತ್ತದೆ. ಅದನ್ನು ಬೊಂಬಿನ ನಳಿಕೆಯ ಮೂಲಕ ಒಂದು ಮಡಕೆಗೆ ಸುರಿಯುವಂತೆ ಮಾಡಿರುತ್ತಾರೆ. ಮಡಕೆಯ ಒಳಭಾಗಕ್ಕೆ ಸುಣ್ಣ ಬಳಿದಿರುತ್ತಾರೆ. ಮಾರನೆಯ ಬೆಳಗಿನ ಜಾವ (ಸೂರ್ಯೋದಯಕ್ಕೆ ಮುನ್ನ) ಮಡಕೆಯಲ್ಲಿ ಶೇಖರವಾಗಿರುವ ರಸವನ್ನು ಹೊರ ತೆಗೆದು, ಮತ್ತೆ ಮಡಕೆ ಕಟ್ಟುತ್ತಾರೆ. ಹೀಗೆ ಎರಡು ದಿನ ರಸವನ್ನು ಇಳಿಸಿದ ಮೇಲೆ ಮೂರು ದಿನಗಳ ಬಿಡುವು ಕೊಡುತ್ತಾರೆ. ಈ ರೀತಿ ಹಲವಾರು ಬಾರಿ ಹೊಸ ಹೊಸ ಗಾಯಗಳನ್ನು ಮಾಡಿ ನಾಲ್ಕಾರು ತಿಂಗಳುಗಳ ಕಾಲ ನೀರಾವನ್ನು ಇಳಿಸುತ್ತಾರೆ. ಅಲ್ಲದೆ ಹೆಚ್ಚು ಪ್ರಮಾಣದಲ್ಲಿ ನೀರಾ ಸುರಿಯುವಂತೆ ಮಾಡಲು ಕಾಯಿಗೊನೆಗಳನ್ನು ಕತ್ತರಿಸಿಬಿಡುತ್ತಾರೆ. ಈ ವಿಧಾನವನ್ನು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಅನುಸರಿಸಿದರೂ ಕೆಲವು ಪ್ರದೇಶಗಳಲ್ಲಿ ಸಣ್ಣ ವ್ಯತ್ಯಾಸಗಳುಂಟು.

ಆಂಧ್ರದಲ್ಲಿ ಮೇಲ್ಭಾಗದ ಎಲೆಗಳ ಬುಡದಲ್ಲಿ ಗಾಯಮಾಡಿ ತೆಗೆಯುತ್ತಾರೆ. ಈಚೆಗೆ ಹೊಸ ವಿಧಾನವೊಂದನ್ನು ಅನುಸರಿಸುತ್ತಾರೆ. ಇದರ ಪ್ರಕಾರ ತೊಗಟೆ ತೆಗೆದ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಒಂದೊಂದು ಸರ್ತಿಗೆ ಒಂದೊಂದರಿಂದ ಮಾತ್ರ ರಸ ಸುರಿಯುವಂತೆ ಮಾಡುತ್ತಾರೆ. ಇದರಿಂದ ಇನ್ನೆರಡು ಭಾಗಗಳಿಗೆ ಎರಡು ದಿನ ಬಿಡುವು ದೊರೆತಂತಾಗುತ್ತದೆ. ಈ ವಿಧಾನದಿಂದ ಸಾಮಾನ್ಯವಾಗಿ ಬರುವ ರಸದ ಪ್ರಮಾಣವನ್ನು ದ್ವಿಗುಣಗೊಳಿಸಬಹುದೆಂದು ಹೇಳುತ್ತಾರೆ. ಪ್ರತಿಯೊಂದು ಮರದಿಂದ ಸುಮಾರು 70-310 ಕಿ.ಗ್ರಾಂ. ನೀರಾ ಪಡೆಯಬಹುದೆಂದು ಅಂದಾಜು ಮಾಡಲಾಗಿದೆ.

ಈಚಲು ಬಳಕೆ : ನೀರಾ ಸಿಹಿಯಾಗಿದ್ದು ಪುಷ್ಟಿದಾಯಕ ಪಾನೀಯವಾಗಿದೆ. ಇದರಲ್ಲಿ ಬಿ ಮತ್ತು ಸಿ ಜೀವಾತುಗಳು ಹೆಚ್ಚು ಪ್ರಮಾಣದಲ್ಲಿದ್ದು, ಪ್ರೋಟೀನುಗಳು, ಶರ್ಕರಗಳು, ರಂಜಕ, ಕ್ಯಾಲ್ಸಿಯಂ, ಕಬ್ಬಿಣ ಇತ್ಯಾದಿ ಲವಣಾಂಶಗಳು ಹೇರಳವಾಗಿವೆ. ಇದರಲ್ಲಿರುವ ಸಿ ಜೀವಾತು ಅಂಶ ಬಹುಕಾಲ ನಶಿಸದೇ ಇರುವುದು ಒಂದು ವಿಶಿಷ್ಟ ಗುಣ. ನೀರಾವನ್ನು ಬಹಳಕಾಲ ಕೆಡದಂತೆ, ಅದರ ಸಹಜ ಕಂಪು ಹೋಗದಂತೆ ಪ್ಯಾಶ್ಚರೀಕರಣ ಮಾಡಿ ಶೇಖರಿಸಬಹುದು. ಹಾಗೆ ಮಾಡುವಾಗ ಸೋಡಿಯಂ ಬೆಂಜೊಟ್ ಮತ್ತು ಸಿಟ್ರಿಕ್ ಅಥವಾ ಮ್ಯಾಲಿಕ್ ಆಮ್ಲಗಳ ಮಿಶ್ರಣವನ್ನು ಇದರೊಂದಿಗೆ ಸೇರಿಸುತ್ತಾರೆ. ಅಲ್ಲದೆ ಅಮೋನಿಯಮ್ ಹೈಡ್ರಾಕ್ಸೈಡ್ ಅಥವಾ ಪಾಲುಡ್ರಿನ್ ಎಂಬ ವಸ್ತುವನ್ನು ಇದಕ್ಕೆ ಸೇರಿಸುವುದರಿಂದಲೂ ನೀರಾವನ್ನು ಸುರಕ್ಷಿತವಾಗಿ ಇಡಬಹುದು. ನೀರಾದಿಂದ ಬೆಲ್ಲವನ್ನೂ ತಯಾರಿಸುತ್ತಾರೆ.

ಉಪಯೋಗ: ನೀರಾವನ್ನು ಗಾಳಿಯೊಂದಿಗೆ ಸಂಬಂಧವಿರದಂತೆ ಭರ್ತಿಮಾಡಿ 12 ರಿಂದ 15 ದಿನಗಳ ಕಾಲ 24o — 27o ಸೆಂ. ಗ್ರೇ. ಉಷ್ಣತೆಯಿರುವಂತೆ ಮಾಡಿ ಜೋಪಾನಿಸುತ್ತಾರೆ. ಈ ರೀತಿ ಇಡುವುದರಿಂದ ನೀರಾ ಹುಳಿಯಾಗುತ್ತದೆ. ಹೀಗೆ ಹುಳಿಯಾದ ನೀರಾವನ್ನು ಬೇರೆ ಪಾತ್ರೆಗಳಿಗೆ ಸುರಿದು, ಚೆನ್ನಾಗಿ ಗಾಳಿಯಾಡುವಂತೆ ಮಾಡಿ ಮೂರು ತಿಂಗಳು ಕಾಲ ಬಿಡುತ್ತಾರೆ. ಆಗ ನೀರಾ ಎಲ್ಲ ವಿನೆಗರ್ ಆಗಿ ಮಾರ್ಪಡುತ್ತದೆ. ಇದರಲ್ಲಿ 6.5% ಅಸಿಟಿಕ್ ಆಮ್ಲವಿರುತ್ತದೆ. ಈಚಲು ಹಣ್ಣುಗಳು ಖರ್ಜೂರ ವೃತ್ಕೃಷ್ಟವಿಲ್ಲದಿದ್ದರೂ ಸಿಹಿಯಾಗಿದ್ದು ತಿನ್ನಲು ಚೆನ್ನಾಗಿರುತ್ತದೆ. ಜೆಲ್ಲಿ, ಜಾಮ್, ಹಾಗೂ ವಿನೆಗರ್ ತಯಾರಿಕೆಯಲ್ಲಿ ಇವನ್ನುಉಪಯೋಗಿಸುತ್ತಾರೆ. ಈಚಲು ಗರಿಗಳನ್ನು ಗುಡಿಸಲುಗಳಿಗೆ ಹೊದಿಸಲು ಉಪಯೋಗಿಸುತ್ತಾರೆ. ಅಲ್ಲದೆ ಅವುಗಳಿಂದ ಚಾಪೆ, ಬೀಸಣಿಗೆ, ಬುಟ್ಟಿ, ಪೆÇರಕೆಗಳನ್ನು ಮಾಡುತ್ತಾರೆ. ಇವುಗಳ ನಾರಿನಿಂದ ಹಗ್ಗವನ್ನೂ ತಯಾರಿಸುತ್ತಾರೆ.

ಮರಗಳನ್ನು ಕಡಿದು ತಾತ್ಕಾಲಿಕ ಸೇತುವೆಗಳನ್ನು ಕಟ್ಟುವುದಕ್ಕೂ ಚಪ್ಪರಗಳ ಕಂಬಗಳಿಗೂ ಉಪಯೊಗಿಸುತ್ತಾರೆ. ಈಚಲು ತೊಗಟೆಯಲ್ಲಿ ಟ್ಯಾನಿಸ್ ಎಂಬ ವಸ್ತು ದೊರೆಯುತ್ತದೆ. ಈಚಲು ಬೀಜಗಳನ್ನು ಉತ್ತರಾಣಿ ಗಿಡದ ಬೇರಿನೊಂದಿಗೆ ಅರೆದು, ವೀಳೆಯದೆಲೆಯೊಂದಿಗೆ ಸೇವಿಸಿದರೆ ಚಳಿಜ್ವರ ವಾಸಿಯಾಗುವುದೆಂದು ಹೇಳುತ್ತಾರೆ. ಹಲ್ಲುನೋವಿನ ನಿವಾರಣೆಯಲ್ಲಿ ಈಚಲು ಬೇರನ್ನು ಉಪಯೋಗಿಸುತ್ತಾರೆ. ಈಚಲು, ತಾಳೆ, ಬಗನಿ, ತೆಂಗು ಮುಂತಾದ ಗಿಡಗಳಿಂದ ಹೆಂಡ ಇಳಿಸುವ ವಾಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ಹೆಂಡವೇ ಈ ಮರಗಳ ಪರಮ ಪ್ರಯೋಜನವಲ್ಲ. ಹೀಗಿದ್ದರೂ ಜನ ತಿಳಿದೊ ತಿಳಿಯದೆಯೋ ಪಾನಕ್ಕಾಗಿ ಇವನ್ನು ಬಳಸುತ್ತಾರೆ.

ಇದು ತಂತಾನೇ ಬೆಳೆದು ಗುಡ್ಡ-ಬೆಟ್ಟಗಳ ಸೌಂದರ್ಯ ಹೆಚ್ಚಿಸುವುದು ಒಂದೆಡೆಯಾದರೆ ಗಿಡ-ಮರಗಳಲ್ಲಿ ಹಾರಾಡುವ ಹಕ್ಕಿ-ಪಕ್ಷಿಗಳಿಗೆ ಆಹಾರವಾಗಿರುವ ಈ ಹಣ್ಣು ತನ್ನ ನೈಜ ಸೌಂದರ್ಯದಿಂದ ಗಮನ ಸೆಳೆಯುತ್ತಿದೆ.  ಆದರೆ ಇತ್ತೀಚಿನ ದಿನಗಳಲ್ಲಿ ಈಚಲು ಅಪರೂಪವಾಗಿದ್ದು, ಹಂತ ಹಂತವಾಗಿ ಮರೆಯಾಗುತ್ತಿದೆ.

Recent Articles

spot_img

Related Stories

Share via
Copy link
Powered by Social Snap