ಬೆಂಗಳೂರು:
ಬೆಂಗಳೂರಿಗೆ ಬರುವ ಪ್ರತಿಯೊಬ್ಬ ಸಿನಿಮಾ ನಟನ ಪಾಲಿನ ಕನಸಿನ ಮೈಲಿಗಲ್ಲಾದ ಕಪಾಲಿ ಚಿತ್ರಮಂದಿರ 3 ವರ್ಷಗಳ ಹಿಂದೆ ನೆಲಸಮವಾಗಿತ್ತು. ಕಪಾಲಿ ಇದ್ದ ಜಾಗದಲ್ಲಿ ಈಗ ಮಾಲ್ ನಿರ್ಮಾಣವಾಗುತ್ತಿದೆ. ಅಲ್ಲಿಗೆ AMB ಮಲ್ಟಿಪ್ಲೆಕ್ಸ್ ಬರ್ತಿದೆ. ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿ ಈಗ ಮಹೇಶ್ ಬಾಬು ಒಡೆತನದ AMB ಸಿನಿಮಾಸ್ ಬರ್ತಿರೋದು ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.
ಕನ್ನಡ ಚಿತ್ರರಂಗದ ಹಲವು ಮರೆಯಲಾಗದ ನೆನಪುಗಳಿಗೆ ಸಾಕ್ಷಿಯಾಗಿದ್ದ ‘ಕಪಾಲಿ’ ಥಿಯೇಟರ್ ನೆಲಸಮವಾಗಿದ್ದು ಸಿನಿರಸಿಕರಿಗೆ ಬೇಸರ ತಂದಿದ್ದು ಸುಳ್ಳಲ್ಲ. ಕೊನೆ ಪಕ್ಷ ಅಲ್ಲಿ ಮಲ್ಟಿಪ್ಲೆಕ್ಸ್ ಬಂದು ಕನ್ನಡ ಸಿನಿಮಾಗಳಿಗೆ ಹೆಚ್ಚಿವ ಪ್ರಾಶ್ತಸ್ಯ ಸಿಗುತ್ತದೆ ಎಂದರೆ ಅದು ಸಾಧ್ಯವಾಗುತ್ತಿಲ್ಲ. ಏಷಿಯಾನ್ ಸಿನಿಮಾಸ್ ಜೊತೆಗೂಡಿ ಈಗಾಗಲೇ ಮಹೇಶ್ ಬಾಬು AMB ಸಿನಿಮಾಸ್ ಮಲ್ಟಿಪ್ಲೆಕ್ಸ್‌ಗಳನ್ನು ಹೈದರಾಬಾದ್‌ನಲ್ಲಿ ನಡೆಸುತ್ತಿದ್ದಾರೆ. ಇದೀಗ ಈ ಮಲ್ಟಿಪ್ಲೆಕ್ಸ್‌ಗಳು ಬೆಂಗಳೂರಿಗೂ ಕಾಲಿಟ್ಟಿದೆ.
ಕನ್ನಡ ಸಿನಿರಸಿಕರು ಕಪಾಲಿ ಚಿತ್ರಮಂದಿರವನ್ನು ಎಂದಿಗೂ ಮರೆಯುದಿಲ್ಲ. 1968ರಲ್ಲಿ ಸುಬೇದಾರ್ ಛತ್ರಂ ರಸ್ತೆಯಲ್ಲಿದ್ದ 44,184 ಚದರ ಅಡಿ ಜಾಗದಲ್ಲಿ ಕಪಾಲಿ ಚಿತ್ರಮಂದಿರ ನಿರ್ಮಾಣವಾಗಿತ್ತು. ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಈ ಚಿತ್ರಮಂದಿರ ಉದ್ಘಾಟಿಸಿದ್ದರು. ಆರಂಭದಲ್ಲಿ ಒಟ್ಟು 1,465 ಆಸನಗಳಿದ್ದ ಕಪಾಲಿ ಜಗತ್ತಿನ ಅತಿದೊಡ್ಡ ಥಿಯೇಟರ್‌ಗಳಲ್ಲಿ ಒಂದೆನಿಸಿತ್ತು.
ಕಪಾಲಿ ಥಿಯೇಟರ್ ಮಾಲೀಕರಾಗಿದ್ದ ದಾಸಪ್ಪ ಸಹೋದರರು 4 ವರ್ಷಗಳ ಹಿಂದೆ ಬೆಳಗಾವಿ ಉದ್ಯಮಿಯೊಬ್ಬರಿಗೆ ಚಿತ್ರಮಂದಿರದ ಜಾಗವನ್ನು ಮಾರಾಟ ಮಾಡಿದ್ದರು. ಕೊನೆ ಕೊನೆಗೆ ನಿರ್ಮಾಪಕ, ವಿತರಕ ಜಯಣ್ಣ ಕಪಾಲಿ ಚಿತ್ರಮಂದಿರ ಗುತ್ತಿಗೆಗೆ ಪಡೆದುಕೊಂಡಿದ್ದರು. 5 ವರ್ಷಗಳ ಗುತ್ತಿಗೆ ಅವಧಿ ಮುಗಿದ ಬಳಿಕ ಥಿಯೇಟರ್ ಮಾರಾಟವಾಗಿತ್ತು.
ಕನ್ನಡ ಮಾತ್ರವಲ್ಲದೇ ಹಿಂದಿ, ಇಂಗ್ಲೀಷ್ ಸಿನಿಮಾಗಳು ಕಪಾಲಿ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಸದ್ದು ಮಾಡಿದ್ದವು. ಡಾ. ರಾಜ್‌ಕುಮಾರ್ ನಟನೆಯ ಹಲವು ಸಿನಿಮಾಗಳು ಇದೇ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದ್ದವು. ಅಣ್ಣಾವ್ರ ‘ಮಣ್ಣಿನ ಮಗ’ ಕಪಾಲಿಯಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಸಿನಿಮಾ ಎನಿಸಿಕೊಂಡಿತ್ತು. ‘ಹಾಲು ಜೇನು’ ಸಿನಿಮಾ ರಿಲೀಸ್ ವೇಳೆ ದೊಡ್ಡ ಕಟೌಟ್ ಥಿಯೇಟರ್ ಮಂದೆ ಹಾಕಲಾಗಿತ್ತು. ಅಂದಿನಿಂದಲೇ ಕಟೌಟ್ ಟ್ರೆಂಡ್ ಶುರುವಾಯಿತು.
ಶಿವಣ್ಣ- ಉಪೇಂದ್ರ ಜೋಡಿಯ ‘ಓಂ’ ಸಿನಿಮಾ 30 ಬಾರಿ ಕಪಾಲಿ ಚಿತ್ರಮಂದಿರಲ್ಲಿ ರಿಲೀಸ್ ಆಗಿತ್ತು. ರಜನಿಕಾಂತ್ ನಟನೆಯ ತಮಿಳಿನ ‘ಅಪೂರ್ವ ರಾಗಂಗಳ್’ ಸಿನಿಮಾ ಕೂಡ ಇದೇ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಮೊದಲಿಗೆ 1,465 ಆಸನ ಸಾಮರ್ಥ್ಯವನ್ನು ಬಳಿಕ 1,112ಕ್ಕೆ ಇಳಿಸಲಾಗಿತ್ತು. ‘ಹುಲಿರಾಯ’ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕೊನೆಯ ಸಿನಿಮಾ ಎನಿಸಿಕೊಂಡಿದೆ.
ದಶಕಗಳ ಹಿಂದೆ ಗಾಂಧಿನಗರದಲ್ಲಿ 10ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಸಂತೋಷ್, ನರ್ತಕಿ, ತ್ರಿವೇಣಿ ಹಾಗೂ ಅನುಪಮಾ ಚಿತ್ರಮಂದಿರಗಳು ಮಾತ್ರ ಉಳಿದುಕೊಂಡಿವೆ. 49 ವರ್ಷಗಳ ಬಳಿಕ ಕಪಾಲಿ ಥಿಯೇಟರ್ ಶಾಶ್ವತವಾಗಿ ಬಾಗಿಲು ಮುಚ್ಚಿ ಕೊನೆಗೆ ನೆಲಸಮವಾಗಿತ್ತು. ಈಗ ಅಲ್ಲಿ ಐದಂತಸ್ತಿನ ದೊಡ್ಡ ಕಟ್ಟಡ ನಿರ್ಮಾವಾಗುತ್ತಿದೆ.
ಮುಂದಿನ ವರ್ಷ AMB ಸಿನಿಮಾಸ್ ಮಲ್ಟಿಪ್ಲೆಕ್ಸ್ ಆರಂಭವಾಗುವುದಾಗಿ ದೊಡ್ಡ ಹೋರ್ಡಿಂಗ್ ರಾರಾಜಿಸುತ್ತಿದೆ. ಗೋಲ್ಡ್ ಕ್ಲಾಸ್ ಲಾಂಚ್ ಸೇರಿ 5ರಿಂದ 6 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳು ಬರಲಿವೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸಾಕಷ್ಟು ಉದ್ಯಮಗಳಲ್ಲಿ ಮಹೇಶ್ ಬಾಬು ಹಣ ಹೂಡಿಕೆ ಮಾಡಿದ್ದಾರೆ. ಸಿನಿಮಾ ಮಲ್ಟಿಪ್ಲೆಕ್ಸ್ ಉದ್ಯಮಕ್ಕೂ ಕೆಲ ದಿನಗಳ ಹಿಂದೆ ಕಾಲಿಟ್ಟಿದ್ದರು.
ಹೈದರಾಬಾದ್‌ನಲ್ಲಿ AMB ಸಿನಿಮಾಸ್ ಸಕ್ಸಸ್ ಆಗುತ್ತಿದ್ದಂತೆ ಆ ಚೈನ್ ಅನ್ನು ವಿಸ್ತರಿಸಲು ಮಹೇಶ್ ಬಾಬು ಮುಂದಾಗಿದ್ದರು. 3 ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಹೊಸ ಮಲ್ಟಿಪ್ಲೆಕ್ಸ್ ಆರಂಭಿಸಲು ತೀರ್ಮಾನಿಸಿದ್ದರು. ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ಸಿಗಲ್ಲ ಎನ್ನುವ ಬೇಸರವಿದೆ. ಗಾಂಧಿನಗರದಲ್ಲಿ ತಲೆ ಎತ್ತುತ್ತಿರುವ AMB ಸಿನಿಮಾಸ್‌ನಲ್ಲೂ ಅದೇ ಮುಂದುವರೆಯುವ ಸಾಧ್ಯತೆಯಿದೆ. ಸ್ಟಾರ್ ನಟರು ಕಡಿಮೆ ಸಿನಿಮಾಗಳು ಮಾಡುವುದೇ ಥಿಯೇಟರ್‌ಗಳು ಮರೆಯಾಗಲು ಕಾರಣ ಎನ್ನುವ ವಾದವೂ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ