ಬೆಂಗಳೂರಿನಲ್ಲಿ ಜುಲೈ 1 ರಿಂದ ಜೆಡಿಎಸ್ ಜನತಾಮಿತ್ರ : ಹೆಚ್.ಡಿ.ಕೆ

ಬೆಂಗಳೂರು: ಜುಲೈ 1 ರಿಂದ 17 ರವರೆಗೆ ಬೆಂಗಳೂರಿನಲ್ಲಿ 17 ದಿನಗಳ ಕಾಲ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಜನತಾ ಮಿತ್ರ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಈ ಸಭೆಯಲ್ಲಿ ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳು ಹಾಗೂ ವಾರ್ಡ್ ಅಧ್ಯಕ್ಷರುಗಳು ಭಾಗಿಯಾಗಿದ್ದರು. ಜಲಧಾರೆಯಂತೆ ಜನತಾ ಮಿತ್ರ ಕಾರ್ಯಕ್ರಮವೂ ಯಶಸ್ವಿ ಆಗಬೇಕು. ರಾಜ್ಯದ ಕನ್ನಡಿಗರೆಲ್ಲಾ ನೆಲಮಂಗಲ ಸಮಾವೇಶದಲ್ಲಿ ಸೇರಿದಂತೆ ಬೆಂಗಳೂರು ಮಹಾನಗರದ ಜನತೆ ಜನತಾ ಮಿತ್ರ ಸಮಾವೇಶದಲ್ಲಿ ಸೇರಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸಲಹೆ, ಸೂಚನೆಗಳನ್ನು ಮಾಜಿ ಮುಖ್ಯಮಂತ್ರಿಗಳು ನೀಡಿದರು.

ಜನತಾ ಮಿತ್ರ ವಾಹನವು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಪ್ರತಿಯೊಂದು ವಾರ್ಡ್ ಗಳಿಗೂ ಹೋಗಬೇಕು. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚಾರ ಮಾಡಬೇಕು. ಎಲ್ಲ ವಾರ್ಡ್ ಗಳಲ್ಲಿಯೂ ಸಭೆಗಳನ್ನು ನಡೆಸಬೇಕು. ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನರು ತಮ್ಮ ನಿರೀಕ್ಷೆಯ ಸರಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೊಡಬಹುದು. ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸ್ಪಷ್ಟ ಸೂಚನೆ ಅವರು ನೀಡಿದರು.

ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್ ಇ ಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ, ನನ್ನನ್ನು ಒಳಗೊಂಡಂತೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ನೇತೃತ್ವದ ತಂಡಗಳ ಮೂಲಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದೇವೆ. ಈ ವಾಹನಗಳು ಬರುವ ಮುನ್ನ ಆಯಾ ಕ್ಷೇತ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆಮನೆಗೂ ಮುಟ್ಟಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ಜನತಾ ಮಿತ್ರ ಉದ್ದೇಶ: 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ನಗರದ ಜನತೆಗೆ ಮನದಟ್ಟು ಮಾಡಿಕೊಡಬೇಕು. ಅಲ್ಲದೆ, ಪ್ರಾದೇಶಿಕ ಆಸ್ಮಿತೆಯ ಪಕ್ಷವಾದ ಜಾತ್ಯತೀತ ಜನತಾದಳವು ಈ ಯಾತ್ರೆಯ ಮೂಲಕ ಜನರಿಂದ ಭವಿಷ್ಯದ ಸರಕಾರ ಹೇಗೆ ಕೆಲಸ ಮಾಡಬೇಕು? ಜನರ ನಿರೀಕ್ಷೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನೇರವಾಗಿ ಜನತೆಯಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಅವರು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ; ಎಲ್ಲರಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯ, ಕುಡಿಯುವ ನೀರು, ಜಲಮೂಲಗಳ ಸಂರಕ್ಷಣೆ, ಕೆರೆಕಟ್ಟೆಗಳ ರಕ್ಷಣೆ, ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ, ಸುಗಮ ಸಂಚಾರ, ಸ್ವಚ್ಛತೆ, ನೈರ್ಮಲ್ಯ, ಸಮರ್ಪಕ ಕಸ ವಿಲೇವಾರಿ, ಆರ್ಥಿಕವಾಗಿ ದುರ್ಬಲರಾಗಿರುವವರ ಸಂಬಲೀಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲು ನಿರ್ಧರಿಸಿದ್ದು, ಈ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜನತಾ ಮಿತ್ರದಲ್ಲಿ ಅಭಿಪ್ರಾಯ ಸಂಗ್ರಹ ಹೇಗೆ?: ಸಮಾಜದ ಎಲ್ಲ ವರ್ಗದ ಜನರೂ ಸುನಾಯಾಸವಾಗಿ ಭವಿಷ್ಯದ ಸರಕಾರ ಹೇಗಿರಬೇಕು? ಅಭಿಪ್ರಾಯಗಳನ್ನು ಸಾರ್ವಜನಿಕರು ಕಾಗದದಲ್ಲಿ ಬರೆದು ವಾಹನದಲ್ಲಿರುವ ‘ಜನತಾ ಮಿತ್ರ; ಬಾಕ್ಸ್’ನಲ್ಲಿ ಹಾಕಬಹುದು. ವಾಹನದಲ್ಲಿಯೇ ಒಂದು ಪೆÇೀಡಿಯಂ ಇದ್ದು, ಅದರಲ್ಲಿ ಒಂದು ಟ್ಯಾಬ್, ಕ್ಯೂ ಆರ್ ಕೋಡ್ ಕೂಡ ಇದ್ದು, ಮೊಬೈಲ್ ಮೂಲಕ ಅದನ್ನು ಸ್ಕ್ಯಾನ್ ಮಾಡುವ ಅಭಿಪ್ರಾಯವನ್ನು ದಾಖಲುಸಬಹುದು.

ವಿಶೇಷ ತಂಡಗಳ ರಚನೆ: ಹದಿನೇಳು ದಿನಗಳ ಕಾಲ ನಡೆಯಲಿರುವ ಜನತಾ ಮಿತ್ರ ಯಾತ್ರೆಯಲ್ಲಿ ಪ್ರತಿ ವಾಹನದ ನೇತೃತ್ವ ವಹಿಸಲು ಮಾಜಿ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ಶಾಸಕರು, ಹಿರಿಯ ಮುಖಂಡರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಿದ್ದಾರೆ.

ಬೃಹತ್ ಸಮಾವೇಶ: ಜುಲೈ 17ರಂದು ಜನತಾ ಮಿತ್ರ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಆ ದಿನವೇ ಬೆಂಗಳೂರಿನಲ್ಲಿ ಬೆಂಗಳೂರು ಜನರೇ ಸೇರುವ ಬೃಹತ್ ಸಮಾವೇಶ ನಡೆಯುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು ಅವರು.

ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಅಧ್ಯಕ್ಷ ಆರ್. ಪ್ರಕಾಶ್ ವಿವಿಧ ಮುಖಂಡರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap