ಬೆಂಗಳೂರು:
ಇದೇ ಮೇ 31ರಂದು ಎಸ್.ಐ.ಟಿ ಮುಂದೆ ವಿಚರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ವಿಡಿಯೋ ಕಳುಹಿಸಿದ ಬೆನ್ನಲ್ಲೇ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ(ವಿಶೇಷ ತನಿಖಾ ದಳಕ್ಕೆ) ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಮಹಿಳೆಯ ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ, ಅವರ ಮೊಬೈಲ್ ವಶಕ್ಕೆ ಪಡೆದು ಕಾಲ್ ಡೀಟೆಲ್ಸ್ ಸಹ ಪರಿಶೀಲನೆ ಮಾಡಿತ್ತು. ಈ ವೇಳೆ ಭವಾನಿ ರೇವಣ್ಣ ಮತ್ತು ಸತೀಶ್ ಬಾಬು ಕರೆ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಭವಾನಿ ಅವರನ್ನು ವಿಚಾರಣೆ ನಡೆಸಲು ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ಯಾವ ನಿಯಮದಡಿ ನೋಟಿಸ್ ನೀಡಿದ್ದಾರೆಂದು ಎಸ್ಐಟಿ ತಿಳಿಸಿಲ್ಲ. ಇದರಿಂದ ಬಂಧನ ಭೀತಿ ಎದುರಾಗಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ವಕೀಲರ ಮೂಲಕ ಭವಾನಿ ರೇವಣ್ಣ ಅವರು ಮನವಿ ಮಾಡಿದರು.
ಮಹಿಳೆಯನ್ನು ಅಪಹರಣ ಮಾಡಿದ ಆರೋಪ ಪ್ರಕರಣದಲ್ಲಿ ಬಾಬಣ್ಣ, ಹೆಚ್.ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಬಾಬಣ್ಣ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್. ಡಿ. ರೇವಣ್ಣ ಅವರಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ.