ಬೆಂಗಳೂರು
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಂದೆ ವಿಚಾರಣೆಗೆ ಮೇ 31 ರಂದು ಹಾಜರಾಗುವುದಾಗಿ ಹೇಳಿದ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಬಂದಿದ್ದು ಯಾವ ದೇಶದಿಂದ ಎಂಬ ಬಗ್ಗೆ ಎಸ್‌ಐಟಿ (SIT) ಪರಿಶೀಲನೆ ನಡೆಸುತ್ತಿದೆ.
ರಾಜ್ಯದ ಜನತೆಗೆ ಕ್ಷಮಾಪಣೆ ಕೇಳಿದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣೆಗೆ ಭಾರತಕ್ಕೆ ಬರುವುದಾಗಿ ತಿಳಿಸಿ ವೀಡಿಯೋ ಮಾಡಿ ಹಂಚಿಕೊಂಡಿದ್ದರು. ಈ ವೀಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ ಎಂಬುದನ್ನು ಎಸ್‌ಐಟಿ ತನಿಖೆ ಮಾಡುತ್ತಿದೆ. ಆ ಮೂಲಕ ಪ್ರಜ್ವಲ್ ರೇವಣ್ಣ ಸಂಪರ್ಕಕ್ಕೆ ಎಸ್ಐಟಿ ಪ್ರಯತ್ನಿಸಿದೆ
ಕಳೆದ ಬಾರಿ ಕೂಡ ಬರ್ತೀನಿ ಎಂದು ಹೇಳಿ ಪ್ರಜ್ವಲ್ ರೇವಣ್ಣ ಒಂದು ವಾರಗಳ ಕಾಲವಕಾಶ ಕೋರಿದ್ದರು. ಆದರೆ ಒಂದು ವಾರ ಕಳೆದರೂ ವಾಪಸ್ ಆಗದೇ ಗೈರಾದರು. ಹೀಗಾಗಿ ಈಗಲೇ ಪ್ರಜ್ವಲ್ ರೇವಣ್ಣ ಸಂಪರ್ಕಿಸಲು ಎಸ್ಐಟಿ ಪ್ರಯತ್ನಿಸುತ್ತಿದೆ.
ಪ್ರಜ್ವಲ್ ರೇವಣ್ಣ ವಾಪಸ್ ಆಗುತ್ತಿರುವುದರಿಂದ ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಬರ್ತಾರಾ ಅಥವಾ ಬೇರೆ ಯಾವ ಏರ್ಪೋರ್ಟ್‌ಗೆ ಬರಬಹುದು ಎಂದು ಎಸ್‌ಐಟಿ ಯೋಚಿಸಿದ್ದು, ಅಲರ್ಟ್ ಆಗಿದೆ.
ಎಲ್ಲೇ ಬಂದು ಇಳಿದರೂ ಸನ್ನದ್ದರಾಗಿ ವಶಕ್ಕೆ ಪಡೆಯಲು ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ. ಬೇರೆ ಏರ್‌ಪೋರ್ಟ್‌ಗೆ ಬಂದಲ್ಲಿ ಕೂಡಲೇ ವಶಕ್ಕೆ ಪಡೆಯುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಈ ಸಂಬಂಧ ಸೋಮವಾರ ಎಸ್‌ಐಟಿ ಅಧಿಕಾರಿಗಳ ಸಭೆ ನಡೆದಿದೆ. ಪ್ರಜ್ವಲ್ ರೇವಣ್ಣ ವಾಪಸ್ ಆದ ನಂತರದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.