ಬೆಂಗಳೂರು:
ಕೇಂದ್ರ ಮಾರ್ಗಸೂಚಿಯ ಅನ್ವಯ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ಇನ್ನೂ 32 ತಾಲೂಕು ಗಳಲ್ಲಿ ಅದೇ ಪರಿಸ್ಥಿತಿ ಇದೆ. ಹಲವೆಡೆ “ಹಸುರು ಬರ’ ಕಾಣಿಸಿಕೊಂಡಿದ್ದು, ಬೆಳೆ ಹಸುರಾಗಿ ಕಂಡರೂ ಇಳುವರಿ ಇಲ್ಲದಂತಾಗಿದೆ. ಇಂತಹ 15 ತಾಲೂಕು ಗಳನ್ನು ಹೆಚ್ಚುವರಿಯಾಗಿ ಎರಡನೇ ಪಟ್ಟಿಯಲ್ಲಿ ಬರಪೀಡಿತ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ.
ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಗುರುವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಹಾಗೂ ಅಧಿ ಕಾರಿಗಳ ತಂಡವು ಸುಮಾರು ಎರಡು ತಾಸುಗಳ ಕಾಲ ಸಭೆ ನಡೆಸಿ, ಪೂರಕ ದಾಖಲೆಗಳನ್ನು ಒದಗಿಸಿದೆ.
ಇದಾದ ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಡದೊಂದಿಗೆ ಮತ್ತೂಂದು ಸುತ್ತಿನ ಚರ್ಚೆ ನಡೆಸಿದ್ದು, ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಮತ್ತು 35 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿದೆ. ಸೆ. 22ರಂದೇ ಸಚಿವ ಸಂಪುಟ ನಿರ್ಣಯ ಕೈಗೊಂಡು ಅದೇ ದಿನ ಕೇಂದ್ರ ಸರಕಾರಕ್ಕೆ ಪಟ್ಟಿ ಕಳುಹಿಸಿಕೊಡಲಾಗಿದೆ.
ಶೇ. 90ರಷ್ಟು ಬಿತ್ತನೆ ಆಗಿದ್ದು, 42 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರ ಜಮೀನಿನಲ್ಲಿ ಹಸುರು ಕಾಣಿಸಿದರೂ ಇಳುವರಿ ಮಾತ್ರ ಇಲ್ಲವಾಗಿದೆ. “ಹಸುರು ಬರ’ ತಲೆದೋರಿದೆ. ಹೀಗಾಗಿ ಕೇವಲ ಹಸುರನ್ನಷ್ಟೇ ನೋಡಿ ಬರ ನಿರ್ಧರಿಸುವ ಬದಲು ರೈತರೊಂದಿಗೆ ಸಂವಾದ ನಡೆಸಬೇಕು, ಇಳುವರಿಯ ವಾಸ್ತವ ಸ್ಥಿತಿಗತಿಯ ಅಂದಾಜಿನ ಮೇಲೆ ಬರ ಪರಿಸ್ಥಿತಿಯ ನಿರ್ಧಾರಕ್ಕೆ ಬರಬೇಕು ಎಂದು ಕೇಂದ್ರ ತಂಡಕ್ಕೆ ಮನದಟ್ಟು ಮಾಡಲಾಗಿದೆ.
ಪ್ರಸಕ್ತ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ. 28ರಷ್ಟು ಮಳೆ ಕೊರತೆ ಆಗಿದೆ. ಬರಗಾಲ ದಿಂದಾಗಿ ಇದುವರೆಗೆ ಸುಮಾರು 20ರಿಂದ 25 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ 4,860 ಕೋಟಿ ರೂ. ಪರಿಹಾರ ಕೇಳಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ರಾಜ್ಯದ ಅಣೆಕಟ್ಟುಗಳು ಬರಿದಾಗಿವೆ. ಕುಡಿಯುವ ನೀರಿನ ಕೊರತೆ, ವಿದ್ಯುತ್ ಕೊರತೆಯ ಆತಂಕವೂ ಸೃಷ್ಟಿಯಾಗಿದೆ. ರಾಜ್ಯ ದಲ್ಲಿ ಹಸುರು ಬರ ತಲೆದೋರಿದೆ. ಎಲ್ಲವನ್ನೂ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡ ಲಾಗಿದೆ. ಬೆಳೆ ನಷ್ಟ ಪರಿಹಾರ ಹೆಚ್ಚಳದ ಬಗ್ಗೆಯೂ ಗಮನ ಸೆಳೆಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ