ಬೆ-ಮೈ ಹೆದ್ದಾರಿ : ಜೀವಕ್ಕೆ ಕುತ್ತು ತರುತ್ತಿವೆ ತಾತ್ಕಾಲಿಕ ತಿರುವುಗಳು

ಮಂಡ್ಯ:

       ಬೆಂಗಳೂರು-ಮೈಸೂರು ನಡುವಿನ ಸಂಪರ್ಕಕ್ಕೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದ್ಯತೆ ನೀಡಿದ್ದು ನಡುವಿನ ನಗರ, ಪಟ್ಟಣಗಳ ಸಂಪರ್ಕವನ್ನು ನಿರ್ಲಕ್ಷಿಸಿದೆ. ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿ 2 ತಿಂಗಳಾದರೂ ನಿಗದಿತ ಸ್ಥಳದಲ್ಲಿ ಅಧಿಕೃತವಾಗಿ ಆಗಮನ- ನಿರ್ಗಮನ ಪಥ ನಿರ್ಮಾಣವಾಗಿಲ್ಲ.

     ನಗರ, ಪಟ್ಟಣ ಹಾಗೂ ಪ್ರಮುಖ ಹಳ್ಳಿಗಳ ಸಂಪರ್ಕಕ್ಕೆ ಸಣ್ಣ ಕಂಬಗಳನ್ನು ನೆಟ್ಟು ತಾತ್ಕಾಲಿಕವಾಗಿ ತಿರುವು ಪಡೆಯುವ ಪಥ ನಿರ್ಮಿಸಲಾಗಿದೆ. ಅದರಿಂದಲೇ ಅಪಘಾತಗಳು ಹೆಚ್ಚುತ್ತಿವೆ. ‘ಪ್ರಾಧಿಕಾರದ ಅಧಿಕಾರಿಗಳು ‌ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುವ ವಾಹನ ಚಾಲಕರಿಗೆ ಅಲ್ಲಿ ಸರ್ವೀಸ್‌ ರಸ್ತೆಯ ತಿರುವಿದೆ‌ ಎಂಬುದೇ ತಿಳಿಯುವುದಿಲ್ಲ. ಸರ್ವೀಸ್‌ ರಸ್ತೆಯಿಂದ ಹೆದ್ದಾರಿಗೆ ವಾಹನಗಳು ಪ್ರವೇಶ ಪಡೆದ ಕೂಡಲೇ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ.

   ಹೆದ್ದಾರಿಯಿಂದ ಸರ್ವೀಸ್‌ ರಸ್ತೆಗೆ ತಿರುವು ತೆಗೆದುಕೊಳ್ಳುವಾಗಲೂ ಇದೇ ಅಪಾಯಕಾರಿ ಪರಿಸ್ಥಿತಿ ಇದೆ. ವೇಗವಾಗಿ ಬರುವಾಗ ತಕ್ಷಣ ಎಡಕ್ಕೆ ತಿರುಗಿಸಿಕೊಳ್ಳಲು ಬ್ರೇಕ್‌ ಹಾಕಿದಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಶ್ರೀರಂಗಪಟ್ಟಣ, ತೂಬಿನಕೆರೆ, ಇಂಡುವಾಳು, ಹಳೇಬೂದನೂರು, ಅಮರಾವತಿ ಹೋಟೆಲ್‌, ಗೆಜ್ಜಲಗೆರೆ ಸೇರಿ 9 ಕಡೆ ಅಪಾಯಕಾರಿ ತಿರುವುಗಳಿವೆ.

    ಕಳೆದೆರಡು ತಿಂಗಳಲ್ಲಿ ಮಂಡ್ಯ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದ 9 ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ. ಸಾವು, ತೀವ್ರ ಗಾಯವಾದ ಪ್ರಕರಣಗಳಷ್ಟೇ ವರದಿಯಾಗುತ್ತಿವೆ.

    ‘ಹಳೇಬೂದನೂರು, ಗೆಜ್ಜಲಗೆರೆ, ಕಾಮತ್‌ ಹೋಟೆಲ್‌ ಬಳಿಯ ತಿರುವಿನಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಹಲವು ಪ್ರಕರಣಗಳಲ್ಲಿ ವಾಹನಗಳು ನಜ್ಜುಗುಜ್ಜಾಗುತ್ತಿವೆ. ಹಲವು ಚಾಲಕರು ದೂರು ನೀಡದೇ ತೆರಳುತ್ತಿದ್ದಾರೆ’ ಎಂದು ಹಳೇಬೂದನೂರು ಗ್ರಾಮದ ರಮೇಶ್‌ ಹೇಳಿದರು.

     ತಾತ್ಕಾಲಿಕವಾಗಿ ಹಾಕಿರುವ ಫೈಬರ್‌ ಕಂಬಗಳು ಎರಡೂವರೆ ಅಡಿ ಎತ್ತರವಷ್ಟೇ ಇದ್ದು ಚಾಲಕರಿಗೆ ಸರಿಯಾಗಿ ಕಾಣಿಸುತ್ತಿಲ್ಲ. ಕೆಲವರು ‌ಆ ಕಂಬಗಳಿಗೇ ವಾಹನ ಗುದ್ದಿಸಿಕೊಂಡು ತೆರಳುತ್ತಿದ್ದಾರೆ. ಹಲವೆಡೆ ಅವು ‌ರಸ್ತೆಯಲ್ಲಿ ಬಿದ್ದಿವೆ. ಈ ತಾತ್ಕಾಲಿಕ ಪಥ ನಿರ್ವಹಣೆಗೆ ‌ಸಿಬ್ಬಂದಿಯೂ ಇಲ್ಲ.

     ‘ಗ್ರಾಮಸ್ಥರು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕೇಳಿದೆಡೆಯೆಲ್ಲಾ ತಾತ್ಕಾಲಿಕವಾಗಿ ಆಗಮನ- ನಿರ್ಗಮನ ಪಥ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಅಧಿಕೃತವಾಗಿ ಆಗಮನ- ನಿರ್ಗಮನ ಪಥ ನಿರ್ಮಾಣವಾಗುವವರೆಗೂ ಸಮಸ್ಯೆ ಹೀಗೇ ಇರಲಿದೆ. ಟೋಲ್‌ ಆರಂಭವಾದ ನಂತರ ಕೆಲವು ಪಥಗಳನ್ನು ಸ್ಥಗಿತಗೊಳಿಸಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

     ಪ್ರತಿಕ್ರಿಯೆಗಾಗಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link