ಭಾರತದಲ್ಲಿಯೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಕರ್ನಾಟಕದಲ್ಲಿ ಆಗಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಕರ್ನಾಟಕದಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಹಾಗೂ ಬಿಕ್ವೆಸ್ಟ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಪ್ರೈ.ಲಿ. ಸಹಯೋಗದೊಂದಿಗೆ ಆಯೋಜಿಸಿರುವ ಕರ್ನಾಟಕದಲ್ಲಿ ಎಥನಾಲ್ ಉತ್ಪಾದನೆಯ ನಿಯಮ, ಆವಿಷ್ಕಾರ ಹಾಗೂ ಸ್ಥಿರತೆಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕದ 32 ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಯನ್ನು ಕೈಗೆತ್ತಿಕೊಂಡಿದೆ. ಇನ್ನೂ 60 ಸಕ್ಕರೆ ಕಾರ್ಖಾನೆಗಳು ಅನುಮತಿ ಪಡೆಯುವ ಹಂತದಲ್ಲಿವೆ. ಎಥನಾಲ್ ರಾಜ್ಯಸರ್ಕಾರ ಎಥನಾಲ್ ನೀತಿಯನ್ನು ರೂಪಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಥನಾಲ್ ಉತ್ಪಾದನೆಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುವುದು. ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಎಥನಾಲ್ ಉತ್ಪಾದನೆಯನ್ನು ಶೇ. 20 ರಷ್ಟು ಹೆಚ್ಚಿಸಲಾಗುವುದು. ಕೇವಲ ಕಬ್ಬಿನಿಂದ ಮಾತ್ರವಲ್ಲ, ಭತ್ತ, ಜೋಳ ಹಾಗೂ ಗೋಧಿಯ ಹೊಟ್ಟಿನಿಂದ ತಯಾರಿಸಬಹುದಾಗಿದೆ ಎಂದರು.

ಇಂಧನ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರತೆಯನ್ನು ಸಾಧಿಸಬೇಕಿದೆ :

ಎಥನಾಲ್ ಉತ್ಪಾದನೆಯಲ್ಲಿ ಇನ್ನಷ್ಟು ಸಂಶೋಧನೆಗಳಾಗಬೇಕು. ಈಗ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಹಸಿರು ಇಂಧನದ ಬಹಳ ಮುಖ್ಯ. ಭಾರತದ ಶೇ. 43 ರಷ್ಟು ನವೀಕರಿಸಬಹುದಾದ ಇಂಧನವನ್ನು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ಮೂರು ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ., ಸಮುದ್ರದ ನೀರಿನಿಂದ ಅಮೋನಿಯಾವನ್ನು ಉತ್ಪಾದಿಸುವ ನಿಟ್ಟಿನಲ್ಲಿ 1 ಲಕ್ಷ 30 ಸಾವಿರ ಕೋಟಿಯಷ್ಟು ಬಂಡವಾಳ ಕರ್ನಾಟಕಕ್ಕೆ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನವೀಕರಿಸಬಹುದಾದ ಇಂಧನಗಳ ಉತ್ಪಾದನೆಗೆ ವಿಶೇಷ ನೀತಿಗಳು, ಅನೇಕ ಪ್ರೋತ್ಸಾಹಕಗಳನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಕಾರ್ಖಾನೆಗಳು ಕರ್ನಾಟಕದಲ್ಲಿ ತಲೆಎತ್ತಲಿವೆ. ಪ್ರಧಾನಿ ಮೋದಿಯವರ ಕನಸಿನಂತೆ ಭಾರತ ದೇಶ ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಬೇಕಿದೆ. ಈ ರೀತಿ 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಸಾಧಿಸಬಹುದಾಗಿದೆ ಎಂದರು.

ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ಆರ್ಥಿಕತೆಗೆ ಕೊಡುಗೆ ನೀಡಿದೆ :

ಕಬ್ಬಿನ ಬೆಳೆಯಿಂದ ಉತ್ಪನ್ನಗಳನ್ನು ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ಆರ್ಥಿಕತೆಗೆ ಬಹಳಷ್ಟು ಕೊಡುಗೆ ನೀಡುತ್ತಿವೆ. 72 ಸಕ್ಕರೆ ಕಾರ್ಖಾನೆಗಳು ಇಂದು ಲಕ್ಷಾತರ ಜನ ರೈತರಿಗೆ ಕೃಷಿಯಲ್ಲಿ ಲಾಭ ತಂದುಕೊಟ್ಟಿದೆ. ಕಬ್ಬಿನ ಪದಾರ್ಥಗಳ ಉತ್ಪಾದನೆಯಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಅದನ್ನು ಅಳವಡಿಸಿಕೊಳ್ಳಬೇಕಿದೆ. ಕಬ್ಬಿನಿಂದ ಮೊಲೆಸಿಸ್, ಬೆಗಾಸ್ ಉತ್ಪನ್ನದ ನಂತರ ಎಥನಾಲ್ ನ್ನು ಉತ್ಪಾದಿಸಲಾಗುತ್ತಿದೆ. ಪ್ರಾರಂಭದಲ್ಲಿ ಕೇಂದ್ರ ಸರ್ಕಾರ 5% ಎಥನಾಲ್ ಉತ್ಪಾದನೆಗೆ ಅನುಮತಿ ನೀಡಿತ್ತು. ಫಾಸಿಲ್ ಫ್ಯೂಯಲ್ ಬಳಕೆ ಕಡಿಮೆ ಮಾಡುವುದರಿಂದ ವಿದೇಶ ವಿನಿಮಯ ಉಳಿತಾಯವಾಗುತ್ತದೆ. ಈ ಇಂಧನದ ಮಿತಬಳಕೆಯಿಂದ ದೇಶಕ್ಕೆ ಆರ್ಥಿಕ ಉಳಿತಾಯವಾಗುವುದಲ್ಲದೇ ಪರಿಸರ ಸಂರಕ್ಷಣೆಯನ್ನು ಮಾಡಿದಂತಾಗುತ್ತದೆ ಎಂದರು.

ಪರಿಸರ ಸ್ನೇಹಿ ಇಂಧನದ ಉತ್ಪಾದನೆಗೆ ಪ್ರೋತ್ಸಾಹ :

ವಾಹನಗಳು ಉಗುಳುವ ಹೊಗೆಯಿಂದ ಹೆಚ್ಚಿನ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಆದ್ದರಿಂದ ಪರಿಸರ ಸ್ನೇಹಿ ಇಂಧನದ ಅವಶ್ಯಕತೆ ಇದ್ದು, ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗಬೇಕು. ಪರಿಸರ ಸ್ನೇಹಿ ಇಂಧನದ ಉತ್ಪಾದನೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು 248 ಕೋಟಿ ರೂ.ಗಳಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ಎಥನಾಲ್ ಗೆ ಬೇಡಿಕೆ ನಿರಂತರವಾಗಿರುತ್ತದೆ. ಎಥನಾಲ್ ಉತ್ಪಾದನೆಯಿಂದ ಸಕ್ಕರೆ ದರ ಸೇರಿದಂತೆ ಸರ್ಕಾರದ ಸಬ್ಸಿಡಿಗಳೂ ಹೆಚ್ಚಿ ಎಥನಾಲ್ ಉತ್ಪಾದನಾ ಸಂಸ್ಥೆಗಳಿಗೆ ಲಾಭವಾಗುತ್ತದೆ. ಸಕ್ಕರೆ ಸಂಸ್ಥೆಗಳು ರೈತನ ಹಿತರಕ್ಷಣೆಯನ್ನು ವಹಿಸಬೇಕು. ಬಹುಬೆಳೆ ಉತ್ಪಾದನೆ, ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.

ಕಬ್ಬಿನ ಉತ್ಪನ್ನಗಳು ಆರ್ಥಿಕತೆ ಅವಕಾಶ ನೀಡುತ್ತವೆ :

ಸಕ್ಕರೆಯ ಅಂಶವಾದ ಗ್ಲೂಕೋಸ್ ಮತ್ತು ಸುಕ್ರೋಸ್‍ನ ಅಣುವಿನಲ್ಲಿ ಅಪಾರವಾದ ಶಕ್ತಿಯಿದೆ. ಅದರಲ್ಲಿ ಜೈವಿಕ ಅಣುವಿನ ಶಕ್ತಿಯಿದೆ. ಕಬ್ಬಿನಲ್ಲಿ ಗ್ಲೂಕೋಸ್ ವiತ್ತು ಸುಕ್ರೋಸ್ ಅಂಶಗಳು ಹೇರಳವಾಗಿವೆ. ಸುಮಾರು 80 ಕ್ಕಿಂತ ಹೆಚ್ಚು ಪದಾರ್ಥಗಳನ್ನು ಕಬ್ಬಿನಿಂದ ತಯಾರಿಸಬಹುದಾಗಿದೆ. ಕಬ್ಬಿನ ಸಿಪ್ಪೆಯಿಂದ ಹಿಡಿದು ಪ್ರತಿಯೊಂದು ಭಾಗವೂ ಬಳಸಬಹುದಾಗಿದೆ. ಕಬ್ಬಿನಿಂದ ಉತ್ಪಾದನೆ, ಉತ್ಪನ್ನ ಹಾಗೂ ಆರ್ಥಿಕತೆಗೆ ಅವಕಾಶವನ್ನು ನೀಡುತ್ತದೆ. ಅತಿ ಹೆಚ್ಚು ನೀರು ಬೇಕಾಗುವ ಬೆಳೆ ಕಬ್ಬು. ನೀರಿನ ನಿರ್ಬಂಧ ಇಲ್ಲ, ಬೆಳೆ ಬೆಳೆಯಲು ತಾಂತ್ರಿಕ ಸಹಾಯವನ್ನು ಕೃಷಿ ಇಲಾಖೆ ನೀಡುತ್ತದೆ ಎಂದರು.

Recent Articles

spot_img

Related Stories

Share via
Copy link
Powered by Social Snap