ಭ್ರಷ್ಟರನ್ನು ಮಟ್ಟ ಹಾಕಿಯೇ ಅಧಿಕಾರದಿಂದ ವಿಶ್ರಾಂತಿ: ಗೃಹ ಸಚಿವ ಆರಗ ಜ್ಞಾನೇಂದ್ರ

ನಿಪ್ಪಾಣಿ : ಅಕ್ರಮ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತಂದು, ಭ್ರಷ್ಟರನ್ನು ಮಟ್ಟ ಹಾಕುವವರೆಗೂ, ವಿಶ್ರಮಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಗುಡುಗಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ನಿಪ್ಪಾಣಿ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪಿಎಸೈ ಹಗರಣದ ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲದೆ, ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ತನಿಖೆಯು ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರು, ಹತಾಶರಾಗಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಸಿಐಡಿ ತನಿಖೆಗೆ ವಹಿಸಲಾದ ಹಲವಾರು ದೂರುಗಳ ಬಗ್ಗೆ ಎಫ್.ಐ.ಆರ್ ದಾಖಲಾಗಿಲ್ಲ, ಎಫ್.ಐ.ಆರ್ ಆದ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ, ಆದರೆ ಪ್ರಾಮಾಣಿಕವಾಗಿ ತನಿಖೆ ಆಗುತ್ತಿರುವ ಪಿಎಸೈ ವಿಷಯದಲ್ಲಿ ನಮ್ಮ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಎಂದು ಆರೋಪ ಮಾಡಿದರು.

ಬಿಜೆಪಿ ವಿರೋಧ ಪಕ್ಷವಾಗಿ ಕಡ್ಲೆಪುರಿ ತಿನ್ನುತ್ತಾ ಇದ್ದರಾ? ಎಂದ, ಸಿದ್ದರಾಮಯ್ಯ ನವರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು ” ನಾವು ಕೇಳಿದ್ದೆವು, ಆದರೆ ಅವರು ಸ್ಪಂದಿಸಿರಲಿಲ್ಲ”.

“ಹಾಗಾದರೆ ನಾವುಗಳು ಕೇಳದೇ ಇರುವುದನ್ನು, ಅವರು (ಸಿದ್ದರಾಮಯ್ಯ) ಕೇಸು ಗಳನ್ನು ಮುಚ್ಚಿ ಹಾಕುವುದಕ್ಕೆ ಸಿಕ್ಕಿದ ಪರವಾನಿಗೆ ಎಂದು ತಿಳಿದಿದ್ದರೇ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಸಿಐಡಿ ತನಿಖೆಯ ಹಳಿ ತಪ್ಪಿಸಿ, ಭ್ರಷ್ಟರ ರಕ್ಷಣೆಗೆ, ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.

“ನನ್ನ ಹಾಗೂ ಮುಖ್ಯಮಂತ್ರಿಯವರ, ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ?” ಎಂದು ಸಚಿವರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮುಜರಾಯಿ ಹಜ್ ಮತ್ತು ವಕ್ಫ್ ಖಾತೆ ಸಚಿವರೂ, ನಿಪ್ಪಾಣಿ ಕ್ಷೇತ್ರದ ಶಾಸಕರೂ ಆದ ಶಶಿಕಲಾ ಜೊಲ್ಲೆ ಹಾಗೂ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ್ ಜೊಲ್ಲೆ, ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಪಾಟೀಲ್, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap