ಹೊನ್ನಾಳಿ:
ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ ಅನುಪಮವಾದುದು ಎಂದು ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ, ಲೋಕಸಭಾ ಚುನಾವಣಾ ಸೆಕ್ಟರ್ ಅಧಿಕಾರಿ ಎಚ್. ನಾಗಪ್ಪ ಹೇಳಿದರು.ತಾಲೂಕಿನ ಬೇಲಿಮಲ್ಲೂರು ಗ್ರಾಮದ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ಮತದಾನದ ಮಹತ್ವದ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಪ್ರಜಾಪ್ರಭುತ್ವದ ಪಾತ್ರ ಅನನ್ಯವಾದದ್ದು. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಎಲ್ಲಾ ಮತದಾರರೂ ಚುನಾವಣೆ ಸಂದರ್ಭಗಳಲ್ಲಿ ತಮ್ಮ ಹಕ್ಕು ಚಲಾಯಿಸಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಮತದಾನ ಪ್ರಜಾಪ್ರಭುತ್ವದ ಬುನಾದಿ ಇದ್ದಂತೆ. ಉತ್ತಮ ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಲು ಸಾಧ್ಯ. ಮತದಾರರು ಜಾಗೃತರಾಗಿ ಸಮರ್ಥ, ದಕ್ಷ, ಪಾರದರ್ಶಕ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ರಾಜ್ಯದ, ದೇಶದ ಪ್ರಗತಿ ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಸಂಸದರು, ಶಾಸಕರ ಪಾತ್ರ, ಅವರನ್ನು ಆಯ್ಕೆ ಮಾಡುವ ವಿಧಾನ, ಮತದಾರರ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ವಿವರಣೆ ನೀಡಿದರು.ವಿವಿ ಪ್ಯಾಟ್ ಯಂತ್ರದ ಕಾರ್ಯವಿಧಾನ, ಮತದಾನ ಮಾಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಎಚ್. ನಾಗಪ್ಪ ತೋರಿಸಿದರು.ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ