ನವದೆಹಲಿ:
ಕೆಲ ದಿನಗಳ ಹಿಂದೆ ಪಿತ್ರಾರ್ಜಿತ ತೆರಿಗೆಯ ಬಗ್ಗೆ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ರಾಹುಲ್ ಗಾಂಧಿ ಅವರ ಆಪ್ತ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಇದೀಗ ಮತ್ತೊಂದು ವಿವಾದ ಸುಳಿಯಲ್ಲಿ ಸಿಲುಕಿದ್ದಾರೆ.
ಆ ಸಂದರ್ಭದಲ್ಲಿ, ಭಾರತೀಯರು ಕಳೆದ 75 ವರ್ಷಗಳಿಂದಲೂ ತಮ್ಮೆಲ್ಲಾ ವೈವಿಧ್ಯತೆಗಳ ನಡುವೆಯೇ ಸಂತೋಷದಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಅಲ್ಲಿ ಇಲ್ಲಿ ಕೆಲವಾರು ಗಲಭೆಗಳಾಗಿರಬಹುದು. ಆದರೆ, ಬಹುಬೇಗನೇ ಅದೆಲ್ಲವನ್ನೂ ಮರೆತು ಒಟ್ಟಿಗೇ ಜೀವನ ನಡೆಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ಪೂರ್ವ ಭಾಗದವರು ಚೀನಾದವರಂತೆ ಕಾಣುತ್ತಾರೆ, ದಕ್ಷಿಣ ಭಾರತೀಯರು ಆಫ್ರಿಕರನ್ನರಂತೆ ಕಾಣುತ್ತಾರೆ. ಇನ್ನು, ಭಾರತದ ಪಶ್ಚಿಮ ಭಾಗದವರು ಅರಬ್ಬರಂತೆ ಕಂಡರೆ, ಉತ್ತರ ಭಾರತೀಯರು ಬಿಳಿ ಚರ್ಮವುಳ್ಳವರಾಗಿದ್ದಾರೆ. ತಮ್ಮ ಬಣ್ಣ, ಸಂಸ್ಕೃತಿಗಳಲ್ಲಿ ಇಂತಹ ಹಲವಾರು ವ್ಯತ್ಯಾಸಗಳಿದ್ದರೂ ಭಾರತೀಯರೆಲ್ಲರೂ ಉತ್ತಮವಾಗಿ, ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ವೈವಿಧ್ಯತೆಗಳ ನಡುವೆಯೂ ಒಗ್ಗಟ್ಟಿನಿಂದ, ಸಹಮತದಿಂದ ಜೀವನ ಸಾಗಿಸುತ್ತಿರುವುದೇ ಭಾರತೀಯರ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಪಿತ್ರೋಡಾ ಅವರ ಈ ಮಾತುಗಳಿಗೆ ಕಿಡಿಕಾರಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಸ್ಯಾಮ್ ಅಣ್ಣನವರೇ, ನಾವು ಭಾರತೀಯರು. ಬಣ್ಣ ಭಾಷೆಗಳಲ್ಲಿ ವೈವಿಧ್ಯತೆ ಹೊಂದಿದ್ದರೂ ನಾವೆಲ್ಲರೂ ಭಾರತೀಯರೇ ಆಗಿದ್ದೇವೆ, ಭಾರತೀಯರಂತೆಯೇ ಕಾಣುತ್ತೇವೆ. ಉದಾಹರಣೆಗೆ, ನಾನು ಈಶಾನ್ಯ ರಾಜ್ಯದವನಾಗಿದ್ದರೂ ನಾನು ಭಾರತೀಯನಂತೆಯೇ ಕಾಣುತ್ತೇನೆಯೇ ಹೊರತು ಅನ್ಯದೇಶವನಂತೆ ಕಾಣುವುದಿಲ್ಲ. ಇಲ್ಲಿ ಎಲ್ಲರೂ ಅಷ್ಟೇ. ನಮ್ಮ ದೇಶದ ಯಾವುದೇ ಭಾಗದ ಜನರು ಭಾರತೀಯರೇ ಆಗಿರುತ್ತಾರೆ. ಸ್ವಲ್ಪ ನಮ್ಮ ದೇಶದ ವೈವಿಧ್ಯತೆ ಬಗ್ಗೆ ಹಾಗೂ ಅದರ ವಿಶೇಷತೆಯ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿ, ಭಾರತವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಹಿಡನ್ ಅಜೆಂಡಾವನ್ನು ಕಾಂಗ್ರೆಸ್ ಹೊಂದಿದೆ. ಕಳೆದ ವರ್ಷ ಮೇ ತಿಂಗಳಿನಿಂದ ನಡೆದ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ನಿರಾಶ್ರಿತರಾಗಿರುವ ಪರಿಸ್ಥಿತಿಗೆ ವಿರೋಧ ಪಕ್ಷವೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಈ ಹಿಂದೆ ಅಮೆರಿಕದಲ್ಲಿ ಸಂಪತ್ತಿನ ಮರುಹಂಚಿಕೆ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತು ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದರು.