ಮಳೆಗೆ ಮುದುರಿದ ರಾಜ್ಯ : ಬಿತ್ತನೆಗೂ ಅವಕಾಶವಿಲ್ಲ

ಮೋಡಕವಿದ ವಾತಾವರಣ : ಜಿಟಿ ಜಿಟಿ ಮಳೆಗೆ ಕಂಗೆಟ್ಟ ರೈತರು

ಅಪಾರ ಪ್ರಮಾಣದ ತೋಗಾರಿಕೆ ಬೆಳೆಗಳು ಹಾನಿ

ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿಂದ ಮೋಡ ಕವಿದ ವಾತಾವರಣ. ಪ್ರವಾಹದ ಜೊತೆಗೆ ಕೆಲವು ಪ್ರದೇಶಗಳಲ್ಲಿ ಜಿಟಿಜಿಟಿ ಮಳೆಯೂ ಸುರಿಯುತ್ತಿದೆ. ಹೊಲಗಳಲ್ಲಿ ಬಿತ್ತನೆಗೂ ಅವಕಾಶ ಕೊಡುತ್ತಿಲ್ಲ. ತೋಟದ ಬೆಳೆಗಳನ್ನು ಬೆಳೆಯಲು ಬಿಡುತ್ತಿಲ್ಲ. ಹೀಗಾಗಿ ರೈತರು ಕಂಗೆಟ್ಟು ಹೋಗಿದ್ದಾರೆ. ಇನ್ನೂ ಅಪಾರ ಪ್ರಮಾಣದ ಬೆಳೆ ಹಾನಿಯೂ ಸಂಭವಿಸಿದೆ.

ಕರಾವಳಿ, ಮಲೆನಾಡಿನಲ್ಲಿ ಜೋರು ಮಳೆಗೆ ಪ್ರವಾಹ ಸಂಭವಿಸಿದೆ, ಇನ್ನೂ ಎರಡು ಮೂರು ಜಿಲ್ಲೆಗಳಲ್ಲಿ ಭೂಕಂಪನ ಹೀಗೆ ರಾಜ್ಯಾದ್ಯಂತ ಮಳೆಗೆ ಜಿಲ್ಲೆಗಳಲ್ಲಿ ಮುದುರಿದ ವಾತಾವರಣದ ಸನ್ನಿವೇಶಗಳು ಕಾಣಿಸುತ್ತಿದ್ದು, ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ನಷ್ಟವನ್ನು ಅನುಭವಿಸುತ್ತಿದ್ದಾರೆ. ಮತ್ತೊಂದು ಕಡೆ ಸಮಯಕ್ಕೆ ಬಿತ್ತನೆ ಮಾಡಲು ಸಾಧ್ಯವಾಗದೇ ಕಂಗಾಲು ಆಗಿದ್ದಾರೆ.

ಬಿತ್ತನೆಗೂ ಅವಕಾಶ ಕೊಡುತ್ತಿಲ್ಲ ವಾತಾವರಣ :

ಜೂನ್ ತಿಂಗಳ ಮೊದಲ ದಿನದಿಂದಲೇ ಮಳೆಗಾಲ ಶುರುವಾದರೂ ಇತ್ತೀಚೆಗೆ ಹಿಂಗಾರು ಮಳೆಗಳು ಉತ್ತಮ ವಾಗಿ ಸುರಿಯುತ್ತಿರುವ ಹಿನ್ನೆಲೆ ಯಲ್ಲಿ ರೈತರು ಬಿತ್ತನೆ ಮಾಡಲು ಸ್ವಲ್ಪ ವಿಳಂಬ ಮಾಡುವುದು ಸಾಮಾನ್ಯವಾಗಿದೆ. ಈಗಲೇ ಬಿತ್ತನೆ ಮಾಡಿದರೆ ಕೊಯ್ಲಿನ ಸಮಯದಲ್ಲಿ ಮಳೆ ಬಂದರೆ ಕಷ್ಟ ಎಂದು ಬಿತ್ತನೆಯನ್ನು ಏಳಂಬ ಮಾಡಲಾಗುತ್ತಿದೆ. ಸಾಕಷ್ಟು ರೈತರು ಜಮೀನುಗಳ ಉಳುಮೆಯನ್ನು ಮಾಡಿಲ್ಲ, ಸತತ ಮಳೆಯಿಂದ ಉಳುಮೆ ಮಾಡಲು ಆಗುತ್ತಿಲ್ಲ ಎಂದು ಸಂಕಟ ಪಡುತ್ತಿದ್ದಾರೆ.

ಪರ್ಯಾಯ ಬೆಳೆಗಳತ್ತ ಗಮನ :

ಸತತ ಮಳೆ ಮತ್ತು ಕೆರೆಗಳಲ್ಲೂ ನೀರು ತುಂಬಿರುವುದರಿಂದ ರೈತರು ಹೆಚ್ಚಾಗಿ ತೋಟದ ಬೆಳೆಗಳತ್ತ ಗಮನಹರಿಸಿದ್ದಾರೆ. ಮಳೆಯಾಧಾರಿತ ಕೃಷಿಗಿಂತ ಹೆಚ್ಚಾಗಿ ಕೊಳವೆ ಬಾವಿ ಆಧಾರಿತ ಕೃಷಿಗೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಹೊಲ ಕೃಷಿ ಪದ್ಧತಿಗೂ ಹಿನ್ನಡೆಯಾಗಿದೆ. ರೈತರು ಪರ್ಯಾಯ ಕೃಷಿ ಕಡೆಗೂ ಗಮನಹರಿಸುತ್ತಿದ್ದು ಕೃಷಿ ಚಟುವಟಿಕೆಗಳಲ್ಲಿ ಏರು ಪೇರಾಗುತ್ತಿರುವುದಂತೂ ಸತ್ಯ.

ರಾಜ್ಯಾದ್ಯಾಂತ ಮೋಡ ಕವಿದ ವಾತಾವರಣ:

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಥಂಡಾ ವಾತಾವರಣದಿಂದ ಈಗಾಗಲೇ ತರಕಾರಿ ಹಾಗೂ ಹೂವಿನ ಬೆಳೆಗಳಿಗೆ ನಾನಾ ರೋಗಗಳು ಆವರಿಸಿವೆ. ರೋಗ ತಡೆಗೆ ಕ್ರಿಮಿನಾಶಕ ಸಿಂಪಡಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲು ಬರಲು ಅಪರೂಪ ಎನ್ನುವ ಪರಿಸ್ಥಿತಿ ಇದೆ. ಈಗಾಗಲೇ ನಾನಾ ರೋಗಗಳಿಗೆ ತುತ್ತಾಗಿರುವ ಬೆಳೆಗಳಿಂದ ಹೆಚ್ಚಿನ ಫಸಲು ನಿರೀಕ್ಷೆ ಸಲಾಗದೆ ರೈತರು ಕಂಗಾಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ತರಕಾರಿಗಳು ಕಡಿಮೆ :

ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣ ಹೆಚ್ಚಾದ ಕಾರಣ ಮಾರುಕಟ್ಟೆಯಲ್ಲಿ ತರಕಾರಿಗಳು ಬರುವುದು ಕಡಿಮೆಯಾಗಿದೆ. ಜಿಲ್ಲೆಯ ಮಾರುಕಟ್ಟೆಗೆ ನೆರೆಯ ರಾಜ್ಯಗಳಿಂದಲೂ ತರಕಾರಿ ಬರುತ್ತಿತ್ತು. ಆದರೂ ಈಗ ಅಲ್ಲಿಂದಲೂ ಬರುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆದಿರುವ ತರಕಾರಿ ಬೆಳೆಗಳಿಗೆ ರೋಗಗಳ ಹಾವಳಿ ಹೆಚ್ಚಾಗಿ ನಿರೀಕ್ಷಿತ ಫಸಲ ಬಾರದ ಹಿನ್ನೆಲೆ ಮಾರುಕಟ್ಟೆಗೆ ತರಕಾರಿ ಬರುವುದು ಮಾತ್ರ ಕಡಿಮೆಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಎಷ್ಟೆಷ್ಟು ಬಿತ್ತನೆಯಾಗಿದೆ?

ತೊಗರಿ, ನೆಲಗಡಲೆ, ಮುಸುಕಿನ ಜೋಳದ ಬಿತ್ತನೆ ನಡೆದಿದೆ. ಆದರೆ ಇನ್ನು ಬಿತ್ತನೆ ವೇಗ ಪಡೆದಿಲ್ಲ.  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ 45360 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಇದುವರೆಗೂ 199 ಹೆಕ್ಟೇರ್‍ನಲ್ಲಿ ಬಿತ್ತನೆಯಾಗಿದೆ. 50480 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆಯ ಗುರಿ ಹೊಂದಿದೆ. ಇದುವರೆಗೂ 3101 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 11764 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಿದ್ದು 361 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 27225 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಗುರಿ ಹೊಂದಿದ್ದು 3732 ಎಕರೆ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿದೆ.

ಮಳೆ ಕಾಟದಿಂದ ತರಕಾರಿ ಮತ್ತು ಹೂವಿನ ಬೆಳೆಗಳಿಗೆ ನಾನಾ ತರದ ರೋಗಗಳು ಆವರಿಸಿದ್ದು ಔಷಧ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ನಿರಂತರ ಮೋಡ ಮುಸುಕಿದ ವಾತಾವರಣ ಜಿಟಿ ಜಿಟಿ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

-ನರಸಿಂಹ ಮೂರ್ತಿ ತರಕಾರಿ, ಹೂ ಬೆಳೆಗಾರ.

ಈಗ ಯಾವ ಕಾಲದಲ್ಲಿ ಮಳೆ ಅಗುತ್ತದೆ ಎಂದು ಹೇಳುವುದೇ ಕಷ್ಟ ಕಳೆದ ಕೆಲವು ವರ್ಷಗಳಿಂದ ಹಿಂಗಾರು ಮಳೆಗಳು ಚೆನ್ನಾಗಿ ಆಗುತ್ತಿದ್ದವು. ಹೀಗಾಗಿ ನಾವೆಲ್ಲ ಜುಲೈ ಕೊನೆಯ ಅಥವಾ ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿದ್ದೆವು. ಬೆಳೆಗಳು ಚೆನ್ನಾಗಿ ಆಗಿವೆ. ಈಗ ಮಳೆ ಸುರಿಯುತ್ತಿರುವುದರಿಂದ ಉಳುಮೆ ಮಾಡಲು ಕಷ್ಟವಾಗುತ್ತಿದೆ.

-ನವೀನ್ ರೈತ

Recent Articles

spot_img

Related Stories

Share via
Copy link
Powered by Social Snap