ಮಳೆ-ಬೆಳೆ ಕುರಿತು ಕೃಷಿಕರು ದೊಡ್ಡಮ್ಮ ದೇವರ ಮೊರೆ

ತೋವಿನಕೆರೆ:

     ಬಯಲು ಸೀಮೆಯ ಹಲವು ತಾಲ್ಲೂಕುಗಳ ಕೃಷಿಕರು ಮಳೆ ಬಾರದೇ ತೀವ್ರ ಬರಗಾಲದಿಂದ ಬೆಳೆಗಳು, ಮೇವಿನ ಕೊರತೆ, ಕುಡಿಯಲು ನೀರಿನ ಅಭಾವ ಉಂಟಾದಾಗ ಬುಕ್ಕಪಟ್ಟಣದ ದೊಡ್ಡಮ್ಮ ದೇವರ ಮೊರೆ ಹೋಗಿ ಮಳೆ-ಬೆಳೆಗಾಗಿ ದೇವರಲ್ಲಿ ಬೇಡಿಕೊಳ್ಳುವ ವಾಡಿಕೆ ಹಲವು ಶತಮಾನಗಳಿಂದ ನಡೆದುಕೊಂಡು ಬರಲಾಗುತ್ತಿದೆ.

   ಕೊರಟಗೆರೆ ತಾಲ್ಲೂಕಿನ ಬುಕ್ಕಪಟ್ಟಣದ ದೊಡ್ಡಮ್ಮ ದೇವರನ್ನು ಸಿದ್ದರಬೆಟ್ಟಕ್ಕೆ ಕರೆತಂದು ಸಾವಿರಾರು ಜನರು ಮಳೆ ಕರುಣಿಸುವಂತೆ ಬೇಡಿಕೊಂಡರು. ಕೆಲವರು ಕಣ್ಣೀರು ಹಾಕಿ ವಿನಮ್ರವಾಗಿ ಕೇಳಿಕೊಂಡದ್ದೂ ಉಂಟು.

   ತುಮಕೂರು ಜಿಲ್ಲೆಯ ಪಾವಗಡ, ಶಿರಾ, ಮಧುಗಿರಿ, ತುಮಕೂರು, ಕೊರಟಗೆರೆ ತಾಲೂಕುಗಳಲ್ಲದೆ ಆಂಧ್ರಪ್ರದೇಶದ ಗಡಿಗಳ ಪ್ರದೇಶಗಳಿಂದಲೂ ಶ್ರಮಿಕ ವರ್ಗದವರ ಆರಾಧ್ಯದೈವ ತೋವಿನಕೆರೆ ಸಮೀಪದ ಬುಕ್ಕಪಟ್ಟಣದ ದೊಡ್ಡಮ್ಮ. ಈ ದೇವರು ಸಿದ್ದರಬೆಟ್ಟದ ಸಿದ್ದಪ್ಪನ ಸಹೋದರಿಯರಲ್ಲಿ ಒಬ್ಬರು.
ಈ ವರ್ಷ ಮುಂಗಾರು ಕೈ ಕೊಟ್ಟಿರುವುದರಿಂದ ರೈತರನ್ನು ಅತಂಕಕ್ಕೆ ದೂಡಿದೆ. ನೂರಾರು ಹಳ್ಳಿಗಳ ಜನರು ದೊಡ್ಡಮ್ಮನನ್ನು ಸಿದ್ದರಬೆಟ್ಟಕ್ಕೆ ಭಾನುವಾರ ಸಂಜೆ ಕರೆತಂದಿದ್ದರು.

   ಸೋಮವಾರ ಬೆಳಿಗ್ಗೆ ಗಂಗಾ ಸ್ನಾನ ಮಾಡಿಸಿ ದೇವರನ್ನು ಪಟ್ಟಕ್ಕೆ ಕೂರಿಸಿ ಮಳೆ, ಬೆಳೆ ಕುರಿತು ಆರಿಕೆ ಮಾಡಿಕೊಂಡಾಗ ಆಕೆಯ ದೈವವಾಣಿಯಂತೆ `ಇತ್ತೀಚಿನ ದಿನಗಳಲ್ಲಿ ಜನರ ಮಾತು, ನಡೆವಳಿಕೆ ಸರಿಯಾಗಿಲ್ಲ, ಎಂದೇಳಿ ಶೀಘ್ರವಾಗಿ ಮಳೆ ಬರುತ್ತದೆ, ಎಂಬ ವಾಕ್ಯ ಕೇಳಿಬಂದಿತು.

   ಸಿದ್ದರಬೆಟ್ಟದ ಈಶ್ವರ ದೇವಾಲಯದ ಹತ್ತಿರ ವಿಶಾಲವಾದ ಬಂಡೆಯಿದ್ದು, ಸಾವಿರಾರು ಜನ ಸೇರಿದ್ದರು. ರಾಜ್ಯದ ವಿವಿಧ ಕಡೆಗಳಿಂದ ಇತಿಹಾಸಗಾರರು ಜನಾಂಗಗಳ ಪೂಜಾರರು, ಮುಖಂಡರುಗಳು ಈ ಸಲ ಅಗಮಿಸಿದ್ದು ವಿಶೇಷವಾಗಿ ಕಂಡುಬಂದಿತು. ಇದೇ ಜಾಗದ ಸಮೀಪ ದಲಿತ ರಾಜ ಕುರಂಗರಾಯ ಕಟ್ಟಿಸಿದ ಹಾಳು ಬಿದ್ದಿರುವ ಕೋಟೆ ಇದೆ. ಬೆಟ್ಟದ ಬುಡದಲ್ಲಿ ಗ್ರಾಮ ಪಂಚಾಯತಿ ಮುಖ್ಯ ಕೇಂದ್ರ ಸ್ಥಾನವಾಗಿರುವ ಕುರಂಕೋಟೆ ಹೆಸರಿನ ಊರು ಇದ್ದು, ಅದನ್ನು ದಲಿತ ರಾಜ ಕುರಂಗರಾಯ ನಿರ್ಮಿಸಿದ್ದು ಎನ್ನುತ್ತಾರೆ ಪೂರ್ವಿಕರು.

  ಕುರಂಕೋಟೆ ಗ್ರಾಮ ಪ್ರವೇಶ ಮಾಡದ ದೊಡ್ಡಮ್ಮ ದೇವರು ಜಮೀನುಗಳ ಮೂಲಕ ದೊಡ್ಡ ಕಾಯಪ್ಪ ಸ್ವಾಮಿ ಸನ್ನಿಧಿಗೆ ಬಂದು ಬೆಟ್ಟಕ್ಕೆ ಸಾಗಿತು. ಅದೇ ದಿನ ಮತ್ತೆ ಬಂದು ಗ್ರಾಮದಿಂದ ಹೊರಗಡೆಯಿಂದ ಹೋಯಿತು. ಬೆಟ್ಟದ ಮೇಲೆ ಹಲವಾರು ಸ್ಥಳಗಳಲ್ಲಿ ಸಾಮೂಹಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುರಂಕೋಟೆಯ ದೊಡ್ಡಕಾಯಪ್ಪ ಸೇವಾ ಸಮಿತಿಯವರು ಬೆಟ್ಟ ಹತ್ತುವುವರಿಗೆ ಊಟದ ವ್ಯವಸ್ಥೆ ಮಾಡಿದ್ದರು.

   ದೊಡ್ಡಕಾಯಪ್ಪ ದೇವಾಲಯದ ಮುಂಭಾಗದಲ್ಲಿ ದೊಡ್ಡಮ್ಮ ದೇವರ ಸನ್ನಿಧಿಯಲ್ಲಿ ಭಾನುವಾರ ಮತ್ತು ಸೋಮವಾರ, ಸಿದ್ದರಬೆಟ್ಟದ ಮೇಲೆ ಹಲವು ಸಾವಿರ ಕುರಿಗಳು ಪ್ರದಕ್ಷಿಣೆ ಹಾಕಿಸಿದ್ಧರು. ಕೃಷಿಕರು ಮಳೆಗೆ ಮಹತ್ವ ನೀಡುತ್ತಾರೆ ಎನ್ನುವುದು ಈ ದಿನ ಸೇರಿದ್ದ ಸಾವಿರಾರು ಜನರೇ ಇದಕ್ಕೆ ಸಾಕ್ಷಿ. ಬಂದ ಭಕ್ತಾದಿಗಳಿಗೆ 12 ಕಡೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap