ಮುಂಗಾರು ಆರಂಭವಾಗುತ್ತಿದ್ದು ತಕ್ಕ ಎಚ್ಚರಿಕೆ ತೆಗೆದುಕೊಳ್ಳಿ : ಸಿದ್ದರಾಮಯ್ಯ

ಬೆಂಗಳೂರು :

      ಮುಂಗಾರು ಆರಂಭವಾಗುತ್ತಿದ್ದು, ಬೆಳೆ ರಕ್ಷಣೆಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಇದು ಸೂಚನೆಯಲ್ಲ, ಎಚ್ಚರಿಕೆ, ಸರ್ಕಾರದ ನಿರ್ದೇಶನಗಳನ್ನು ಪರಿಪಾಲಿಸದಿದ್ದರೆ ಕಠಿಣ ಕ್ರಮಕ್ಕೆ ಸಿದ್ದರಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

      ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಿದ ಅವರು, ಕರ್ತವ್ಯ ಲೋಪ ಆಗಬಾರದು. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನೆಪ ಹೇಳಿಕೊಂಡು ಪರಿಹಾರ ಕ್ರಮ ವಿಳಂಬ ಮಾಡುವುದು ಸರಿಯಲ್ಲ. ಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನ ಸರ್ಕಾರದಿಂದ ಬದಲಾವಣೆ ಬಯಸಿದ್ದಾರೆ. ಸರ್ಕಾರಕ್ಕೆ ಹೊಸ ಇಮೇಜ್ ಕೊಡಲೇಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಬಂದಿದೆ ಎಂಬ ಸಂದೇಶ ಹೋಗಬೇಕು ಎಂದರು.

     ಜಿಲ್ಲಾಧಿಕಾರಿಗಳು, ಸಿಈಓ ಳದ್ದು ಜವಾಬ್ದಾರಿಯುತ ಸ್ಥಾನ. ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಹೊಣೆಯೂ ಪ್ರಮುಖವಾದದ್ದು. ಜನತೆ ಬದಲಾವಣೆ ಬಯಸಿದ್ದಾರೆ. ಆಲಸ್ಯ ಬಿಟ್ಟು ಕೆಲಸ ಮಾಡಿ. ಬಹಳ ಜನ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡುವುದಿಲ್ಲ. ಇನ್ನು ಮುಂದೆ ಇಂತಹುದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು ಎಂದರು.

    ಭಾರಿ ಮಳೆ, ಗಾಳಿಯಿಂದ ಮರಗಳು ಬಿದ್ದು ಹೋಗಿವೆ. ಸಿಡಿಲು, ಆಲಿಕಲ್ಲು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅನಾಹುತಗಳಾಗಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಿಮ್ಮ ಬಳಿ ಅನುದಾನ ಲಭ್ಯವಿದೆ. ಅಗತ್ಯವಿದ್ದರೆ ಕೇಳಬೇಕು. ಪರಿಹಾರ ಕ್ರಮ ಕೈಗೊಳ್ಳಲು ತೊಂದರೆ ಇಲ್ಲ. ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಹಾವೇರಿ ಗೋಲಿಬಾರಿನಂತಹ ಘಟನೆ ಮರುಕಳಿಸಬಾರದು ಎಂದರು.

       ಮಳೆ ಬಂದು ಮರಗಳು ಬಿದ್ದುಹೋದರೆ, ಕೂಡಲೇ ತೆರವು ಗೊಳಿಸಬೇಕು. ವಿದ್ಯುಚ್ಚಕ್ತಿ ಕಂಬಗಳು ಬಿದ್ದು ಹೋದರೆ, ಟ್ರಾನ್‌ಫಾರ್ಮರ್ ಹಾಳಾಗಿದ್ದರೆ, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಫೀಲ್ಡ್ಗೆ ಹೋಗಬೇಕು. ಕುಳಿತಲ್ಲೇ ಕುಳಿತು ಪರಿಣಾಮಕಾರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು. ಅದಕ್ಕೇ ಮುಂಚಿತವಾಗಿ ಸಭೆ ಕರೆಯಲಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಕಂಡು ಬಂದಿದ್ದು, ಮುನ್ಸೂಚನೆ ಅರಿತು ಕೆಲಸ ಮಾಡಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link