ಮುಂಗಾರು ವಿಳಂಬವಾಗಿದ್ದರೂ ಬರಗಾಲ ಬರುವುದಿಲ್ಲ :ಎನ್.ಚಲುವರಾಯಸ್ವಾಮಿ

ಬೆಂಗಳೂರು

     ರಾಜ್ಯಾದ್ಯಂತ ಮುಂಗಾರು ಮಳೆ ವಿಳಂಬವಾಗಿದ್ದರೂ ಈ ವರ್ಷ ಬರಗಾಲ ಬರುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.ವಿಧಾನಸಭೆಯ ಮೊಗಸಾಲೆಯಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ಮುಂಗಾರು ಮಳೆ ವಿಳಂಬವಾಗಿ ಆತಂಕ ಕಾಣಿಸಿಕೊಂಡಿದ್ದರೂ ಈ ವರ್ಷ ವಾಡಿಕೆಯ ಪ್ರಮಾಣದಷ್ಟು ಮಳೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಈ ಕುರಿತು ಹವಾಮಾನ ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದು,ಮುಂಗಾರು ತಡವಾಗಿದ್ದರೂ ಈ ವರ್ಷ ವಾಡಿಕೆಯ ಪ್ರಮಾಣದಷ್ಟು ಮಳೆ ಬರಲಿದೆ ಎಂದು ವಿವರ ನೀಡಿದ್ದಾರೆ ಎಂದರು. ಕೆಲ ದಿನಗಳ ಹಿಂದೆ ರಾಜ್ಯದ ಹಲವು ತಾಲ್ಲೂಕುಗಳಲ್ಲಿ ಬರದ ಛಾಯೆ ಕಂಡಿತ್ತು.ಹಲವು ಜಿಲ್ಲೆಗಳ ಮುನ್ನೂರಾ ನಲವತ್ತು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿತ್ತು.

      ಆದರೆ ಇದೀಗ ಬರದ ಛಾಯೆ ಕಡಿಮೆಯಾಗುತ್ತಿದ್ದು ಒಟ್ಟು ಹತ್ತೊಂಭತ್ತು ತಾಲ್ಲೂಕುಗಳ ನೂರಾ ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಹೀಗೆ ದಿನದಿಂದ ದಿನಕ್ಕೆ ರಾಜ್ಯದ ಹಲ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆ ನಿವಾರಣೆಯಾಗುತ್ತಿದ್ದು ಮುಂದಿನ ಕೆಲ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಇವತ್ತು ರಾಜ್ಯದ ಹತ್ತೊಂಭತ್ತು ತಾಲ್ಲೂಕುಗಳಲ್ಲಿ ಬರಗಾಲದ ಛಾಯೆ ಇದ್ದರೂ ಅವುಗಳನ್ನು ಬರಪೀಡಿತ ಎಂದು ಈಗಲೇ ಘೋಷಿಸಲು ಸಾಧ್ಯವಿಲ್ಲ ಎಂದ ಅವರು,ಕೇಂದ್ರದ ಮಾರ್ಗಸೂಚಿಯ ಅನ್ವಯ ಜುಲೈ ಮೂವತ್ತರವರೆಗೆ ಈ ಕುರಿತು ಘೋಷಣೆ ಮಾಡುವಂತಿಲ್ಲ ಎಂದರು. ಹೀಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ವಾಸವಿದ್ದರೂ ರಾಜ್ಯದ ಯಾವುದೇ ಭಾಗಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

     ಈ ಸಂಬಂಧ ಯಾವುದೇ ಹಣದ ಕೊರತೆ ಇಲ್ಲದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದು,ಬರಗಾಲ ಆವರಿಸದಿದ್ದರೂ ಮುಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲದಕ್ಕೂ ತಯಾರಾಗಿರಲು ಸೂಚನೆ ನೀಡಿದ್ದಾರೆ.

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿರುವುದು ನಿಜ.ಆದರೆ ಬಹುತೇಕ ಕೆರೆಗಳಲ್ಲಿ ನೀರು ಇದ್ದು,ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಪರಿಸ್ಥಿತಿ ಕೈ ಮೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಹವಾಮಾನ ವರದಿ ನಿಖರವಾಗಿ ಬರುತ್ತಿದ್ದು ಈ ಹಿಂದಿನಂತೆ ಲೋಪಗಳು ಕಡಿಮೆ.ಹೀಗಾಗಿ ಅದು ನೀಡಿರುವ ಹಾಲಿ ವರದಿ ಭರವಸೆ ಹುಟ್ಟಿಸುವಂತಿದೆ ಎಂದರು.

     ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಚಲುವರಾಯ ಸ್ವಾಮಿ ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap