ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಿಲ್ಲ : ಶೆಟ್ಟರ್

ಹುಬ್ಬಳ್ಳಿ

     ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಿದೆ. ಯೋಜನೆಗಳು, ಮೀಸಲಾತಿ ಜನರಿಗೆ ತಲುಪಲಿಲ್ಲ. ಮೀಸಲಾತಿ ಅನುಷ್ಠಾನ ಮಾಡಲ್ಲ ಎಂದು ಕೋರ್ಟ್ಗೆ ಹೇಳಿ ಜನರಿಗೆ ಮೋಸ ಮಾಡಿದರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

      ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಿಲ್ಲ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿ, ಉತ್ತರ ಕರ್ನಾಟಕದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಕೈಗಾರಿಕೆಗೆ ಎರಡು ಎಕರೆ ಜಮೀನು ಕೊಡಲೂ ಆಗಿಲ್ಲ. ಕೆಲಸ ಮಾಡಲು ಆಗದ ಸಿಎಂ ಯಾಕೆ ಇರಬೇಕು? ಬೊಮ್ಮಾಯಿ ನಮ್ಮವರಿದ್ರೂ ಏನೂ ಮಾಡಲು ಆಗಿಲ್ಲ ಅನ್ನೋದು ಜನರ ಭಾವನೆ ಎಂದರು.

    ಗೆಲುವಿನ ಅಂತರ ಹೆಚ್ಚಾಗಲಿದೆ: ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತ ದ್ವಿಗುಣ ಬೆಂಬಲ ಸಿಕ್ಕಿದೆ. ಗೆಲುವಿನ ಅಂತರ ಕಳೆದ ಬಾರಿಗಿಂತ ಹೆಚ್ಚಾಗಲಿದೆ. ನಾನು ಆರು ಎಲೆಕ್ಷನ್ ಮಾಡಿದ್ದೀನಿ, ಮತದಾರರಿಗೆ ದುಡ್ಡು ಹಂಚಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ, ಕುಕ್ಕರ್ ಕೊಡುತ್ತಾರೆ. ಆದರೆ ಬಿಜೆಪಿಯ ಹೆಸರು ಹೇಳಿಕೊಳ್ಳುವ ವ್ಯಕ್ತಿಗಳು ನಮ್ಮ ಕ್ಷೇತ್ರದಲ್ಲಿ ಹತಾಶರಾಗಿ ಹಣ ಹಂಚಿದ್ದಾರೆ. ಸ್ಲಮ್‌ಗಳಲ್ಲಿ ಜನರಿಗೆ ಐದುನೂರು, ಸಾವಿರ ಹಣ ಕೊಟ್ಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುವುದಾದರೆ ಬಹಳಷ್ಟು ಶ್ರೀಮಂತರೇ ಗೆಲ್ಲುತ್ತಿದ್ದರು ಎಂದು ಹೇಳಿದರು.

    ಪ್ರಹ್ಲಾದ್ ಜೋಶಿ ಹೇಳುತ್ತಿರುವುದು ಸುಳ್ಳು: ಪ್ರಹ್ಲಾದ್ ಜೋಶಿಯವರು ನಿಮ್ಮನ್ನು ಸಚಿವ ಮಾಡಿದ್ರಂತೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ಏಣಿ ಹತ್ತಿ ನಿಚ್ಚಣಿಕೆ ತೆಗೆದು ಹಾಕಿದ್ರು ಅಂತಾರಲ್ಲ ಇದು ಹಾಗಾಗಿದೆ. ನನ್ನ ಸೀನಿಯಾರಿಟಿ ಮೇಲೆ ಮಂತ್ರಿ ಮಾಡಿದ್ರು. ನನ್ನನ್ನು ಪ್ರಹ್ಲಾದ್ ಜೋಶಿ ಮಂತ್ರಿ ಮಾಡಿದ್ರು ಅಂತಾ ನಾನೂ ಹೇಳಿಲ್ಲ, ಅವರೂ ಹೇಳಿಲ್ಲ. ಈಗ ಚುನಾವಣೆಗಾಗಿ ಹೇಳ್ತಿದ್ದಾರೆ ಎಂದರು.

    ನನಗೆ ಟಿಕೆಟ್ ತಪ್ಪಿದ್ದರಿಂದ 20 ಕ್ಷೇತ್ರಗಳಲ್ಲಿ ಎಫೆಕ್ಟ್: ಪ್ರಹ್ಲಾದ್ ಜೋಶಿ ಸುಳ್ಳು ಹೇಳೋದು ಕಲಿತಿದ್ದಾರೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟು ಶಾಸಕನನ್ನಾಗಿ ಮಾಡಿದ್ರೆ ಎಲ್ಲ ಸರಿ ಇರುತ್ತಿತ್ತು. ನನಗೆ ಟಿಕೆಟ್ ತಪ್ಪಿದ್ದು ಹದಿನೈದು, ಇಪ್ಪತ್ತು ಕ್ಷೇತ್ರಗಳಲ್ಲಿ ಎಫೆಕ್ಟ್ ಆಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಂಘಟಿತ ಪ್ರಯತ್ನ ಮಾಡಿದ್ದಾರೆ. ಸರ್ಕಾರದ ವೈಫಲ್ಯವನ್ನು ಜನರಿಗೆ ಹೇಳುವ ಕೆಲಸ ಮಾಡಿದ್ರು ಎಂದು ತಿಳಿಸಿದರು.

   ಲಿಂಗಾಯತರಿಗೆ ಬಿಜೆಪಿ ಅನ್ಯಾಯವಾಗಿದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಮಾತಾಡಿದರು. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ. ಶಂಕರ್ ಪಾಟೀಲ್ ಮುನೇನಕೊಪ್ಪರನ್ನು ಸಚಿವರಾಗಿ ಮಾಡಲು ನಾನು ಲಾಬಿ ಮಾಡಿದ್ದು ನಿಜ. ಪ್ರಹ್ಲಾದ್ ಜೋಶಿಯವರು ಅರವಿಂದ ಬೆಲ್ಲದ್ ಪರ ಲಾಬಿ ಮಾಡಿದ್ದಾಗಿ ದೂರಿದರು.

    ಇಡೀ ಬ್ರಾಹ್ಮಣ ಸಮಾಜ ಟೀಕಿಸಿಲ್ಲ: ನಾನು ಟೀಕಿಸಿದ್ದು ಬಿ.ಎಲ್.ಸಂತೋಷ್ ಪ್ರಹ್ಲಾದ್ ಜೋಶಿ ವಿರುದ್ಧ ಮಾತ್ರ ನಾನು ಮಾತಾಡಿದ್ದು. ಇಡಿ ಬ್ರಾಹ್ಮಣ ಸಮಾಜಕ್ಕೆ ನಾನು ಟೀಕೆ ಮಾಡಿಲ್ಲ ಎಂದು ಹೇಳಿದರು. ಬ್ರಾಹ್ಮಣರು ನನಗೆ ಅತೀ ಹೆಚ್ಚು ಮತ ಹಾಕಿದ್ದಾರೆ. ಈ ಒಳ ಹೊಡೆತದ ಬಗ್ಗೆ ತಿಳಿದುಕೊಳ್ಳಿ. ಬಿಜೆಪಿ ಕೆಲವರ ಹಿಡಿತದಲ್ಲಿದೆ, ಹೀಗಾಗಿ ಈ ಪರಿಸ್ಥಿತಿ ಬಂದಿದೆ. ಬಿಜೆಪಿಯವರಿಗೆ ಅಹಂಕಾರ ಬಂದಿದೆ ಎಂದು ಗುಡುಗಿದರು.

    ನಾನು ಏನೋ ಆಗಬೇಕು ಅಂತಾ ಆಸೆಯಿಂದ ಕಾಂಗ್ರೆಸ್ ಸೇರಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಇವರು ಮಾಡಿದ ಮೋಸಕ್ಕಾಗಿ ಕಾಂಗ್ರೆಸ್ ಸೇರಿದೆ, ಶಾಸಕನಾದ್ರೆ ಮನಸ್ಸಿಗೆ ಸಮಾಧಾನ ಆಗುತ್ತೆ. ಪ್ರಹ್ಲಾದ್ ಜೋಶಿಯವರು ನಾಲ್ಕು ಬಾರಿ ಸಂಸದ, ಮಂತ್ರಿಯಾಗಿದ್ದಾರೆ. ರಾಜಕಾರಣ ಬಿಡಲಿ. ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ, ಪ್ರಧಾನಿ ಆದ್ರು. ಮೋದಿಯವರು ರಾಜಕೀಯ ಬಿಡ್ತಾರಾ? ಅದು ಸಾಧ್ಯವಿಲ್ಲ. ಅವರು ಇನ್ನೊಮ್ಮೆ ಪಿಎಮ್ ಆಗಲು ಪ್ರಯತ್ನ ಮಾಡ್ತಿದ್ದಾರೆ, ಆಗಲಿ ಅಂತಾ ನಾನೂ ಹೇಳ್ತೀನಿ. ಎಲ್ಲಿಯವರೆಗೆ ಜನಾಶೀರ್ವಾದ ಇರುತ್ತೋ ಅಲ್ಲಿಯವರೆಗೂ ರಾಜಕೀಯದಲ್ಲಿ ಇರ್ಬೇಕು ಅನ್ನೋದು ನನ್ನ ನಿಲುವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap