ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟ : ಹೆಚ್‌ ಡಿ ಕೆ

ಬೆಂಗಳೂರು : 

      ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟ; ಒಂದೆಡೆ ಅನ್ನದಾತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದರೆ, ಈ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ್ದೇ ಆಟ. ಘಟಬಂಧನ್ ಕಟ್ಟುವುದರಲ್ಲಿ ಇರುವ ಆತುರ, ಅನ್ನ ಕೊಡುವ ರೈತನ ಬದುಕು ಕಟ್ಟುವುದರಲ್ಲಿ ಇಲ್ಲ. ಹೀಗಿದೆ ಇವರ ಗ್ಯಾರಂಟಿ ವರಸೆ!! ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಈ ಕುರಿತು ಟ್ವೀಟ್ ಮಾಡಿರುವ ಅವರು, ಗ್ಯಾರಂಟಿ ಹಾಗೂ ಭಾಗ್ಯಗಳಿಂದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡುತ್ತೇವೆ ಎಂದು ಬೂಸಿಬಿಟ್ಟ ಕಾಂಗ್ರೆಸ್, ಅಧಿಕಾರಕ್ಕೆ ಬಂದು ಎರಡೇ ತಿಂಗಳು ಕಳೆಯುವ ಮುನ್ನವೇ ರಾಜ್ಯದಲ್ಲಿ ‘ ರೈತರ ಮರಣಮೃದಂಗ ‘ ಶುರುವಾಗಿದೆ. ಸುಭೀಕ್ಷೆಯ ನಾಡು ಕರ್ನಾಟಕದಲ್ಲಿ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದರೆ ಇವರು ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಕಿಡಿಕಾರಿದ್ದಾರೆ.

    ಹಾವೇರಿ ಜಿಲ್ಲೆ ಒಂದರಲ್ಲಿಯೇ 18 ಮಂದಿ ಅನ್ನದಾತರು ಸಾವಿಗೆ ಶರಣಾಗಿರುವುದು, ಇನ್ನಿತರೆ ಜಿಲ್ಲೆಗಳಲ್ಲಿ ಅದೇ ಸರಣಿ ಶುರುವಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಈ ಸಾವುಗಳು ಕಳವಳಕಾರಿ. ರೈತರ ಬದುಕಿಗೇ ಗ್ಯಾರಂಟಿ ಕೊಡದ ಈ ಸರಕಾರ ಘೋರ ಪಾಪ ಎಸಗಿ, ಘಟಬಂಧನ್ ಎಂದು ಚೆಲ್ಲಾಟ ಆಡುತ್ತಿದೆ ಎಂದು ಟೀಕಿಸಿದ್ದಾರೆ.

    ಗ್ಯಾರಂಟಿ ಎಂದು ಬೀಗಿದ ರಾಜ್ಯ ಕಾಂಗ್ರೆಸ್ ಸರ್ಕಾರ, ಆ ಗ್ಯಾರಂಟಿಗಳಲ್ಲಿ ರೈತನ ಪಾಲೇನು? ರಾಜ್ಯಪಾಲರ ಭಾಷಣ, ಬಜೆಟ್ಟಿನಲ್ಲಿ ಈ ಬಗ್ಗೆ ಒಂದು ಪದವನ್ನಾದರೂ ಉಲ್ಲೇಖಿಸಬೇಕಿತ್ತು. ಬಡವರ ಬದುಕಿಗೆ ಗ್ಯಾರಂಟಿ ಕೊಡುತ್ತೇವೆ ಎಂದವರು ಮಾಡಿದ್ದೇನು? ಬಜೆಟ್ಟಿನಲ್ಲಿ ಕೃಷಿ ಅನುದಾನಕ್ಕೆ ಖೋತಾ ಹಾಕಿದ್ದು! ಇವರಾ ರೈತೋದ್ಧಾರಕರು? ನಾಚಿಕೆಗೇಡು. ನಾನು ಮುಖ್ಯಮಂತ್ರಿ ಆಗಿದ್ದಾಗ, ಆ ಹಿಂದಿನ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಆಗಿದ್ದವು. ನನ್ನ ಸರ್ಕಾರ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡಿ ಅವರ ಜೀವ ಉಳಿಸುವ ಕೆಲಸ ಮಾಡಿದೆ. ಅದನ್ನೇ ಕಾಂಗ್ರೆಸ್ ಸರ್ಕಾರ ಈಗ ಮಾಡಲಿ. ಕೃಷಿ ಅನುದಾನಕ್ಕೆ ಕತ್ತರಿ ಹಾಕುವ ಬದಲು ರೈತರಿಗೆ ಆರ್ಥಿಕ ನಿರಾಳತೆ ನೀಡಲಿ ಎಂದು ಆಗ್ರಹಿಸಿದ್ದಾರೆ.

    ಅನ್ನದಾತ ಬಂಧುಗಳಲ್ಲಿ ಹೃದಯಪೂರ್ವಕ ಮನವಿ. ದಯಮಾಡಿ ಯಾರೂ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ. ಒಂದು ಜೀವಹಾನಿ ಆ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತದೆ. ಹೋರಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ನಿಮ್ಮ ಜತೆ ನಾನಿದ್ದೇನೆ. ದಯವಿಟ್ಟು ಯಾರೂ ಜೀವಕ್ಕೆ ಕುತ್ತು ತಂದುಕೊಳ್ಳುವುದು ಬೇಡ ಎಂದು ಮನವಿ ಮಾಡಿಕೊಂಡಿರುವ ಹೆಚ್ ಡಿಕೆ, ಸರ್ಕಾರ ತಕ್ಷಣ ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap