ರೈಲ್ವೆ ಪರೀಕ್ಷೆಯಲ್ಲಿ : ಅಧಿಕಾರಿಗಳಿಗೆ ಸಚಿವ ಸೋಮಣ್ಣ ಮಹತ್ವದ ಸೂಚನೆ

ಮಂಗಳೂರು

ರೈಲ್ವೆ ನೇಮಕಾತಿ ಮಂಡಳಿಯ  ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣವೇ, ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ವಿಚಾರವನ್ನು ರೈಲ್ವೆ ಇಲಾಖೆ ಸಚಿವರ ಗಮನಕ್ಕೆ ತಂದಿದ್ದರು.

‘ಭಾರತೀಯ ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಬರೆಯುವವರು ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸಂಕೇತಗಳು ಮತ್ತು ಆಭರಣಗಳನ್ನು ತೆಗೆಯುವಂತೆ ಮಾಡಬಾರದು. ಜನಿವಾರ, ಮಂಗಳಸೂತ್ರ ತೆಗೆಸದಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಮಂಗಳಸೂತ್ರ ಹಾಗೂ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂದು ಹಾಲ್​ಟಿಕೆಟ್​ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಬಗ್ಗೆ ನಾವು ಅವರ ಗಮನಕ್ಕೆ ತಂದಿದ್ದೆವು. ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಕ್ಸ್​ ಸಂದೇಶದ ಮೂಲಕ ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ, ಧಾರವಾಡ ಮತ್ತು ಬೀದರ್ ಜಿಲ್ಲೆಗಳಲ್ಲಿ ಕರ್ನಾಟಕ ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಪ್ರಕರಣ ಕರ್ನಾಟಕದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಸದ್ಯ ಕರ್ನಾಟಕ ಹೈಕೋರ್ಟ್​​​ನಲ್ಲಿ ಪಿಎಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಕೂಡ ಸಲ್ಲಿಕೆಯಾಗಿದೆ. ಇಂಥ ಸಂದರ್ಭದಲ್ಲೇ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯ ಪ್ರವೇಶ ಪತ್ರ ಕೂಡ ವಿವಾದಕ್ಕೆ ಗುರಿಯಾಗಿತ್ತು.

ರೈಲ್ವೆ ನೇಮಕಾತಿ ಮಂಡಳಿ ಕ್ರಮದ ವಿರುದ್ಧ ವಿಎಚ್​​ಪಿ ಮುಖಂಡ ಶರಣ್ ಪಂಪುವೆಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಹಿಂದೂಗಳ ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಂಸದರು ಹಾಗೂ ಸರ್ಕಾರವನ್ನು ಆಗ್ರಹಿಸಿದ್ದರು. ಇದೀಗ ಅಂತಿಮವಾಗಿ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರ ಮಧ್ಯ ಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ. ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ಏಪ್ರಿಲ್ 28, 29 ಹಾಗೂ 30 ರಂದು ನಡೆಯಲಿದೆ. ಮಂಗಳೂರಿನಲ್ಲಿ ಬೋಂದೆಲ್​ನ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.

Recent Articles

spot_img

Related Stories

Share via
Copy link