ಬೆಂಗಳೂರು:
ಯಾರಿಂದಲಾದರೂ ಲಂಚ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಾಗಲೀ, ಪ್ರಸ್ತುತದ ಆಡಳಿತಾವಧಿಯಲ್ಲಿ ಆಗಲೀ ಲಂಚ ಪಡೆದಿಲ್ಲ.
2013-2018 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಾಗಲೀ ಅಥವಾ ಇದೀಗ ಎರಡನೇ ಬಾರಿ ಸಿಎಂ ಆಗಿರುವ ಅವಧಿಯಲ್ಲಾಗಲೀ ಅಥವಾ ನಾನು ವಿರೋಧ ಪಕ್ಷದ ನಾಯಕನಾಗಿರುವ ಅವಧಿಯಲ್ಲಾಗಿರಲಿ ಐದು ಪೈಸೆ ಲಂಚ ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆಂದು ಹೇಳಿದರು.
ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ ಕ್ಷೇತ್ರವಾರು 25 ಕೋಟಿಯಂತೆ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆಂದು ಇದೇ ವೇಳೆ ತಿಳಿಸಿದರು.