ಮುಂಬೈ:
ಒಂದೆಡೆ ಕಂತೆ ಕಂತೆ ನೋಟುಗಳು ತುಂಬಿದ ಬ್ಯಾಗ್.. ಪಕ್ಕದಲ್ಲೇ ಕುಳಿತು ರಾಜಾರೋಶವಾಗಿ ಸಿಗರೇಟ್ ಸೇದುತ್ತಿರುವ ಶಿವಸೇನೆ ನಾಯಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಏಕನಾಥ ಶಿಂದೆ ಶಿವಸೇನಾದ ಶಾಸಕ ಸಂಜಯ್ ಶಿರ್ಸತ್ , ತಮ್ಮ ಬೆಡ್ ರೂಮ್‌ನಲ್ಲಿ ಸಿಗರೇಟ್ ಸೇದುತ್ತಿದ್ದು, ಪಕ್ಕದಲ್ಲೆ ದೊಡ್ಡ ಬ್ಯಾಗ್ ಇರುವ ವಿಡಿಯೋ ವೈರಲ್ ಆಗಿದೆ. ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್‌ರ ಭ್ರಷ್ಟಾಚಾರ ಆರೋಪಗಳ ಬಳಿಕ ಬುಧವಾರ ರಾತ್ರಿ ಬೆಳಕಿಗೆ ಬಂದ ಈ ವಿಡಿಯೋ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂಬ ಟೀಕೆಗೆ ಕಾರಣವಾಯಿತು. ವಿಡಿಯೋದಲ್ಲಿ ಶಿರ್ಸತ್ ಮಂಚದ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದು, ಪಕ್ಕದಲ್ಲಿ ಬ್ಯಾಗ್ ಇದೆ. ಇದು ಅಕ್ರಮ ಹಣ ಎಂದು ವಿರೋಧಿಗಳು ಆರೋಪಿಸಿದ್ದಾರೆ.
ಆದರೆ ಶಿರ್ಸತ್ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ. “ನಿಮ್ಮ ಚಾನಲ್‌ನ ಸ್ನೇಹಿತನಿಂದ ವಿಡಿಯೋ ನೋಡಿದೆ. ಅದರಲ್ಲಿ ಏನಿದೆ? ನನ್ನ ಮನೆ, ಬೆಡ್ ರೂಮ್, ನಾನು ಮಂಚದ ಮೇಲಿದ್ದೆ, ನನ್ನ ನಾಯಿ ಪಕ್ಕದಲ್ಲಿದೆ, ಬ್ಯಾಗ್ ಇದೆ. ಇದರಿಂದ ಏನು ಸಾಬೀತಾಗುತ್ತದೆ?” ಎಂದು ಪತ್ರಕರ್ತರಿಗೆ ತಿಳಿಸಿದರು. ಬ್ಯಾಗ್‌ನಲ್ಲಿ ಹಣವಿಲ್ಲ, ಪ್ರವಾಸದಿಂದ ಮರಳಿದ ಬಳಿಕ ಬಟ್ಟೆಗಳನ್ನು ಇಟ್ಟಿದ್ದೆ ಎಂದು ಸ್ಪಷ್ಟಪಡಿಸಿದರು. “ಹಣವಿದ್ದರೆ ಬೀರುವಿನಲ್ಲಿ ಇಡುತ್ತಿರಲಿಲ್ಲವೇ? ನನ್ನ ಮನೆಯ ಬೀರುಗಳು ಸತ್ತಿವೆಯೇ?” ಎಂದು ವ್ಯಂಗ್ಯವಾಡಿದರು.
ವಿರೋಧಿಗಳನ್ನು ಟೀಕಿಸಿದ ಅವರು, “ಇವರಿಗೆ ಎಲ್ಲಾ ಕಡೆ ಹಣವೇ ಕಾಣುತ್ತದೆ. ಈ ಹಿಂದೆ ಶಿಂಧೆಯ ಭದ್ರತಾ ಸಿಬ್ಬಂದಿಯ ಬ್ಯಾಗ್‌ನಲ್ಲೂ ಹಣ ಇದೆ ಎಂದಿದ್ದರು. ಬ್ಯಾಗ್ ಇದ್ದರೆ ಹಣ ಎಂದು ಭಾವಿಸುತ್ತಾರೆ. ಬಟ್ಟೆ ಇರಬಹುದೆಂದು ಯೋಚಿಸಲ್ಲ” ಎಂದರು. ವಿಡಿಯೋ ಸೋರಿಕೆ ತಮ್ಮ ರಾಜಕೀಯ ಜೀವನಕ್ಕೆ ಧಕ್ಕೆ ತರುವುದಿಲ್ಲ ಎಂದು ಶಿರ್ಸತ್ ವಿಶ್ವಾಸ ವ್ಯಕ್ತಪಡಿಸಿದರು. “ಇಂತಹ ನಾಟಕಗಳಿಂದ ನನ್ನ ವೃತ್ತಿಗೆ ಚ್ಯುತಿಯಾಗಲ್ಲ. ನನ್ನ ಮನೆಯಲ್ಲಿ ವಿಡಿಯೋ ಚಿತ್ರೀಕರಿಸಿದರೆ ಆಗಲಿ, ಏನನ್ನೂ ಮರೆಮಾಚುವುದಿಲ್ಲ” ಎಂದರು.
“ಮುಂದಿನ ಬಾರಿ ಬ್ಯಾಗ್ ಕಂಡರೆ ಅದನ್ನೂ ಹಣ ಎನ್ನುತ್ತಾರೆ. ಇವು ಬಟ್ಟೆಗಳು, ನೋಟುಗಳಲ್ಲ” ಎಂದು ವ್ಯಂಗ್ಯವಾಡಿದರು. ಮಹಾರಾಷ್ಟ್ರದ ರಾಜಕೀಯ ಒತ್ತಡ ಹೆಚ್ಚುತ್ತಿರುವಾಗ, ಶಿರ್ಸತ್‌ರ ತಂಡ ಈ ವಿವಾದವು ರಾಜಕೀಯ ಕುತಂತ್ರವೆಂದು ಆರೋಪಿಸಿದೆ.
