ನವದೆಹಲಿ :
ಮಹಾರಾಷ್ಟ್ರ ಮೂಲ ಶಿವಸೇನೆಯಿಂದ ಬಂಡಾಯವೆದ್ದು ಏಕನಾಥ ಶಿಂಧೆ ಹಿಂದೆ ಹೋಗಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿ ಸೇರಿದಂತೆ 2 ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮೇ 11)ದಂದು ಪ್ರಕಟಿಸಲಿದೆ.
ಶಿವಸೇನೆಯ 16 ಶಾಸಕರು ಅನರ್ಹಗೊಂಡರೆ ಮಹಾರಾಷ್ಟ್ರ ಮೈತ್ರಿ ಸರ್ಕಾರ ಪತನವಾಗನಹುದು ಎನ್ನಲಾಗುತ್ತಿದ್ದರೂ, ನಮ್ಮ ಬಳಿ ಬಹುಮತ ಸಾಬೀತು ಮಾಡಲು ಅಗತ್ಯ ಶಾಸಕರಿದ್ದಾರೆ ಎಂದು ಆಡಳಿತ ಪಕ್ಷಗಳ ನಾಯಕರು ಹೇಳಿದ್ದಾರೆ.
ಮೂಲ ಶಿವಸೇನೆಯಲ್ಲಿ ಉಂಟಾದ ಬಂಡಾಯದ ಬಳಿಕ ಪಕ್ಷವನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿದ ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹ ಮಾಡಬೇಕು ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು, ಆದರೆ ಇದಕ್ಕೆ ಮಹಾರಷ್ಟ್ರ ಸಿಎಂ ಏಕನಾಥ ಶಿಂಧೆ ಆಕ್ಷೇಪಿಸಿದ್ದಾರೆ.
ಇದಲ್ಲದೇ ಮಹಾರಾಷ್ಟ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಹಲವು ಅರ್ಜಿಗಳು ಸಲ್ಲಿಕೆಯಾಗಿಗಿವೆ. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮಾ.16ರಂದು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ, ಮೇ 11ರಂದು ತೀರ್ಪು ಪ್ರಕಟವಾಗಲಿದೆ.
ಇದೇ ವೇಳೆ, ದೆಹಲಿ ಸರ್ಕಾರದಲ್ಲಿ ಉಪರಾಜ್ಯಪಾಲರ ಮಾತು ಅಂತಿಮವೇ ಅಥವಾ ಚುನಾಯಿತ ರಾಜ್ಯ ಸರ್ಕಾರದ ಮಾತು ಅಂತಿಮವೇ ಎಂಬ ಪ್ರಕರಣದ ಕುರಿತು ಗುರುವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ಒಂದು ವೇಳೆ 16 ಶಿವಸೇನೆ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ಎತ್ತಿ ಹಿಡಿದರೆ, ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಏಕನಾಥ ಶಿಂಧೆ ಬಣದ ಶಿವಸೇನೆ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಉರುಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ ಹಾಗೂ ಸ್ಪೀಕರ್ ರಾಹುಲ್ ನಾರ್ವೇಕರ್ ನಿರಾಕರಿಸಿದ್ದಾರೆ.
ಶಾಸಕರು ಅನರ್ಹರಾದರೂ ಸರ್ಕಾರ ಸುರಕ್ಷಿತವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು, ಬಹುಮತ ಸಾಬೀತಿಗೆ ಸೂಚಿಸಿದರೆ ನಮ್ಮ ಬಳಿ 184 ಮತಗಳಿವೆ. ಅಷ್ಟೇ ಅಲ್ಲದೇ ಮುಂದಿನ ಬಾರಿಯೂ ಇದೇ ಮೈತ್ರಿಕೂಟ ಸರ್ಕಾರ ರಚನೆ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ ಬಾವನ್‌ಕುಳೆ ಹೇಳಿದ್ದಾರೆ.
ಇದೇ ವೇಳೆ, ಸುಪ್ರೀಂ ಕೋರ್ಟ್ ಇಂದಿನ ತೀರ್ಪು ದೊಡ್ಡ ಮೈಲುಗಲ್ಲಾಗಲಿದೆ ಎಂದು ಮೂಲ ಶಿವಸೇನೆ ವಕ್ತಾರ ಸಂಜಯ್ ರಾವುತ್ ಆಶಯ ವ್ಯಕ್ತಪಡಿಸಿದ್ದಾರೆ.