ಶಿಮ್ಲಾ:
ಶಿಮ್ಲಾದಲ್ಲಿ, ಭೂಕುಸಿತದ ನಂತರ ಮಾಲ್ ರಸ್ತೆ ಮತ್ತು ಮುಖ್ಯಮಂತ್ರಿ ನಿವಾಸದ ಬಳಿ ಕೆಲವು ಮರಗಳು ಧರೆಗುರುಳಿವೆ. ಸಂಜೌಲಿ ಬಳಿ ಮರಗಳು ಧರೆಗುರುಳಿದ್ದರಿಂದ ಸಂಜೌಲಿ-ಚೋಟ್ಟಾ ಶಿಮ್ಲಾ ರಸ್ತೆ ಸಂಚಾರ ಬಂದ್ ಆಗಿದೆ. ಭಾಕ್ರಾ-ನಂಗಲ್ ಮತ್ತು ಪಾಂಗ್ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಬುಧವಾರ ಹೆಚ್ಚಾಗಿರುವುದರಿಂದ ನೆರೆಯ ಪಂಜಾಬ್ನಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಸಟ್ಲೇಜ್ ಮತ್ತು ಬಿಯಾಸ್ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತ ಮತ್ತು ಮೇಘಸ್ಫೋಟದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಕೆಲವರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವಶೇಷಗಳಡಿ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಿಕ್ಕಿಬಿದ್ದಿರುವ ಜನರನ್ನು ಸ್ಥಳಾಂತರಿಸಲು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.
ಈಮಧ್ಯೆ, ಭಾರಿ ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಕ್ಕಿ ಮೋರ್ನಲ್ಲಿ ಚಂಡೀಗಢ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಬಡ್ಡಿ-ನಾಲಗಢ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ಮಳೆಯಿಂದ ಬಡ್ಡಿ ಮುಖ್ಯ ಸೇತುವೆ ಹಾಳಾಗಿದೆ. ಕಳೆದ ಕೆಲವು ದಿನಗಳಿಂದ ಭೂಕುಸಿತದಿಂದಾಗಿ ಮಂಡಿ ಮತ್ತು ಕುಲು ನಡುವೆ ಕಿರಾತ್ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಮತ್ತು ನೆರೆಯ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಶಾಲೆಗಳನ್ನು ಆಗಸ್ಟ್ 6ರವರೆಗೆ ಮುಚ್ಚಲಾಗುವುದು ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಬೈನ್ಸ್ ಹೇಳಿದ್ದಾರೆ.
ಈಮಧ್ಯೆ, ಲೂಧಿಯಾನದ ಬಡೋವಾಲ್ನಲ್ಲಿ ನವೀಕರಣಗೊಳ್ಳುತ್ತಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಕಟ್ಟಡದ ಒಂದು ಭಾಗವು ಕುಸಿದು ಶಿಕ್ಷಕರೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ