ತುಮಕೂರು:
ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್ ನಿರ್ಮಾಣವಾಗುತ್ತದೆ. ಇದಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರೇ ಅಸ್ತು ಎಂದಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ
ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ ಒಂದು ಕಡೆ ಕುಸಿತಕ್ಕೆ ಒಳಗಾಗಿ ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಮತ್ತೊಂದು ಕಡೆ ಅಂಡರ್ ಪಾಸ್ ಬಳಿ ಇರುವ ರೈಲ್ವೆ ಹಳಿಗೆ ತಡೆಗೋಡೆ ನಿರ್ಮಾಣವಾಗುತ್ತಿದೆ. ಹೀಗಾಗಿ ಪಾದಾಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುವ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಅಂಡರ್ ಪಾಸ್ ಪರಿಶೀಲನೆ ನಡೆಸಿದರು.
ಇದೇ ವೇಳೆ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಸಾರ್ವಜನಿಕರು ನಮಗೆ ಎಸ್‌ಎಸ್ ಪುರಂನಿಂದ ಶೆಟ್ಟಿಹಳ್ಳಿ ಭಾಗಕ್ಕೆ, ಶೆಟ್ಟಿಹಳ್ಳಿ ಭಾಗದಿಂದ ಎಸ್‌ಎಸ್ ಪುರಂಗೆ ಸಂಚಾರಕ್ಕೆ ಮಾಡೋಕೆ ಕಷ್ಟವಾಗುತ್ತದೆ ಎಂದು ಜನ ತಮ್ಮ ಸಮಸ್ಯೆಯನ್ನು ಶಾಸಕರ ಬಳಿ ತೆರೆದಿಟ್ಟರು. ನಮಗೆ ಸ್ಕೈವಾಕ್ ಬೇಡ. ಸ್ಕೈವಾಕ್ ನಿರ್ಮಾಣ ಮಾಡಿದರೆ ಹತ್ತಲು ಆಗುವುದಿಲ್ಲ. ಇಳಿಯಲು ಆಗುವುದಿಲ್ಲ. ಹಾಗಾಗಿ ಮತ್ತೊಂದು ಅಂಡರ್ ಪಾಸ್ ನಿರ್ಮಿಸುವಂತೆ ಮನವಿ ಮಾಡಿದರು. ಜನರ ಸಮಸ್ಯೆ ಆಲಿಸಿದ ಶಾಸಕರು ಸ್ಕೈವಾಕ್ ನಿರ್ಮಿಸುವ ಚಿಂತೆಯನ್ನು ದೂರ ಸರಿಸಿ, ಮತ್ತೊಂದು ಅಂಡರ್ ಪಾಸ್ ನಿರ್ಮಿಸುವ ಭರವಸೆ ವ್ಯಕ್ತಪಡಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿ ಸಮಸ್ಯೆಗಳು ಹೆಚ್ಚಾಗಿತ್ತು. ಒಂದು ಕಡೆ ಕುಸಿತ ಉಂಟಾಗಿತ್ತು. ಇದರ ಜೊತೆಗೆ ರೈಲ್ವೆ ಹಳಿ ಎರಡೂ ಕಡೆ ತಡೆ ಗೋಡೆ ನಿರ್ಮಾಣ ಮಾಡುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಪಾದಾಚಾರಿಗಳ ಅನುಕೂಲಕ್ಕಾಗಿ ಅಂಡರ್ ಪಾಸ್ ಒಳಗಡೆಯೇ ಸದ್ಯದ ಮಟ್ಟಿಗೆ ಪಾದಾಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಪಾದಾಚಾರಿಗಳ ಸಂಚಾರಕ್ಕೆ ಅನುವು ಆಗುವಂತೆ ಮತ್ತೊಂದು ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಸದಸ್ಯ ವಿಷ್ಣುವರ್ಧನ್ ಮಾತನಾಡಿ, ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ಅನುವು ಮಾಡಿಕೊಡಬೇಕೆಂಬ ನಿಟ್ಟಿನಲ್ಲಿ ಶಾಸಕರು ಇಲ್ಲಿಗೆ ಬಂದು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಪಾದಾಚಾರಿಗಳ ಸಂಚಾರಕ್ಕೆ ಅನುವು ಆಗುವಂತೆ ಮತ್ತೊಂದು ಅಂಡರ್ ಪಾಸ್ ನಿರ್ಮಾಣಕ್ಕೆ ಶಾಸಕರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದರು.
ಪಾಲಿಕೆ ಸದಸ್ಯ ಸಿ ಎನ್ ರಮೇಶ್ ಮಾತನಾಡಿ, ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿ ಪಾದಚಾರಿಗಳ ಸಂಚಾರಕ್ಕೆ ಅನುವು ಆಗುವಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಜನರ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗುತ್ತದೆ ಎಂದು ಹೇಳಿದರು.
ಒಟ್ಟಾರೆ ಮಳೆ ಬಂದಾಗ ಸಂಚಾರಕ್ಕೆ ತೊಂದರೆಯಾಗುವ ಶೆಟ್ಟಿಹಳ್ಳಿ ಅಂಡರ್ ಪಾಸ್, ಈಗ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಪಾದಾಚಾರಿಗಳ ಸಂಚಾರಕ್ಕೆ ಅನುವು ಆಗುವಂತೆ ಪರ್ಯಾಯವಾಗಿ ಮತ್ತೊಂದು ಅಂಡರ್ ಪಾಸ್ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ