ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ಆಡಳಿತ ಬಿಜೆಪಿ ಪಕ್ಷ 40% ಕಮಿಷನ್ ದಂದೆಯಲ್ಲಿ ತೊಡಗಿದ್ದಾರೆ.

ಬೆಂಗಳೂರು : ಕಳೆದ ಎರಡು ಶೈಕ್ಷಣಿಕ ವರ್ಷಗಳಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸೈಕಲ್, ಶೂ ಮತ್ತು ಸಾಕ್ಸ್ ಗಳನ್ನು ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆಯಂತೆ. ಹಿಂದಿನ ವರ್ಷಗಳಲ್ಲಿ ಕೊರೊನಾ ಕಾರಣ ನೀಡಿದ್ದ ಸರ್ಕಾರ ಈ ವರ್ಷ 40% ಕಮಿಷನ್ ನಿಂದಾಗಿ ಖಾಲಿಯಾಗಿರುವ ಖಜಾನೆ ತೋರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನು ಹಾಕಿದ್ದಾರೆ.

ಒಂದೆಡೆ ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ದುಷ್ಟಕೂಟ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡು ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಪ್ರಸ್ತುತ ದಿನದ ವರೆಗೆ ಶಾಲಾ ಮಕ್ಕಳಿಗೆ ನೀಡಬೇಕಾಗಿದ್ದ ಪಠ್ಯಪುಸ್ತಕಗಳ ಬಗ್ಗೆ ಖಚಿತ ತೀರ್ಮಾನವನ್ನು ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೆಲವು ಶಾಲೆಗಳಿಗೆ ಹಳೆಯ ಪಠ್ಯ, ಇನ್ನು ಕೆಲವು ಶಾಲೆಗಳಿಗೆ ಹೊಸ ಪಠ್ಯ, ಉಳಿದ ಶಾಲೆಗಳಿಗೆ ಪಠ್ಯವೇ ಇಲ್ಲದಂತಹ ದುಸ್ಥಿತಿ ಇದೆ ಎಂದು ಸರರ್ಕಾರಕ್ಕೆ ನೇರವಾಗಿ ಪ್ರಶ್ನೆ ಮಾಡಿದರು.

ಕೊರೊನಾ ಕಾಲದ ಕಲಿಕಾ ಅಂತರವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ “ವಿದ್ಯಾಪ್ರವೇಶ” ಮತ್ತು “ಕಲಿಕಾ ಚೇತರಿಕೆ” ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇದಕ್ಕೆ ಸಂಬಂಧಿಸಿದ ಕಲಿಕಾ ಹಾಳೆಗಳನ್ನು ಕೂಡಾ ಪೂರೈಸಲು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಟೀಕಿಸಿದರು.

ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವ ಕಲಿಕಾ ಹಾಳೆಗಳನ್ನು ಶಿಕ್ಷಕರು ಸ್ವಂತ ಖರ್ಚಿನಿಂದ ಡೌನ್ ಲೋಡ್ ಮಾಡಿಕೊಂಡು, ಜೆರಾಕ್ಸ್ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಷ್ಟೊಂದು ಗತಿಗೇಡಿನ ಸರ್ಕಾರ ಹಿಂದೆ ಇರಲಿಲ್ಲ, ಮಂದೆ ಬರಲಾರದು ಎಂದರು.

ವಿದ್ಯಾರ್ಥಿನಿಯರಿಗೆ ಸೈಕಲ್ ಗಳನ್ನು ನೀಡುವ ಯೋಜನೆ ಹಿಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರದ್ದು, ಆ ಯೋಜನೆಯನ್ನು ಕೂಡಾ ಸ್ಥಗಿತಗೊಳಿಸುವ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಯೇ? ಎಂದು ಆರೋಪ ಮಾಡಿದ್ದಾರೆ.

ಶಾಲಾ ಬಡ ಮಕ್ಕಳಿಗಾಗಿ ನಮ್ಮ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಒಂದೊಂದಾಗಿ ಸ್ಥಗಿತಗೊಳಿಸಲು ಬಿಜೆಪಿ ಸರ್ಕಾರ ಹೊರಟಿದೆ. ವಿದ್ಯಾಸಿರಿ ಯೋಜನೆಗೆ ಹಣ ನೀಡುತ್ತಿಲ್ಲ, ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೂ ಕಲ್ಲು ಹಾಕುತ್ತಿದೆ. ಈಗ ಸೈಕಲ್, ಶೂ, ಸಾಕ್ಸ್ ಗಳನ್ನು ಕೂಡಾ ಕಿತ್ತುಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಮುಖಾಂಶಗಳು :

ಬಿಜೆಪಿ ಸರ್ಕಾರದ ವಿರುದ್ದ ಸರಣಿ ಟ್ವಿಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ.

ಶಾಲಾ ಮಕ್ಕಳ ಭವಿಷ್ಯದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ.

ಮಕ್ಕಳಿಗೆ ವಿದ್ಯಾಸಿರಿ, ಕ್ಷೀರ ಭಾಗ್ಯ, ಬಿಸಿ ಊಟಕ್ಕೆ ಕಲ್ಲು ಹಾಕಿದ್ದಾರೆ ಎಂದು ಆರೋಪಿಸಿದರು.

Recent Articles

spot_img

Related Stories

Share via
Copy link
Powered by Social Snap