ಹುಳಿಯಾರು:
ಅರಣ್ಯ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು ಎಂದು ಹುಳಿಯಾರಿನ ವಕೀಲರಾದ ಎಚ್.ಆರ್.ರಮೇಶ್ ಬಾಬು ಸಲಹೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹುಳಿಯಾರಿನ ಎಚ್.ಪಿ.ಜಿ.ಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ದಿನೇ ದಿನೇ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಉಸಿರಾಡಲು ಶುದ್ಧ ಗಾಳಿಯ ಕೊರತೆ ಉಂಟಾಗುತ್ತಿದೆ. ಅದರಿಂದ ಶ್ವಾಸಕೋಶದ ರೋಗಗಳಿಗೆ ಜನರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪರಿಸರ ಸಂರಕ್ಷಣೆ ನಿರ್ಲಕ್ಷ್ಯದಿಂದ ಈ ರೀತಿ ದುಷ್ಪರಿಣಾಮ ಉಂಟಾಗುತ್ತಿದೆ.
ಅದನ್ನು ಅರ್ಥ ಮಾಡಿಕೊಳ್ಳಬೇಕು. ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು. ಪ್ರಕೃತಿಯ ಋಣ ತೀರಿಸಬೇಕು ಎಂದರು.
ಸಿ.ಆರ್.ಪಿ.ದಯಾನಂದ್ ಅವರು ಮಾತನಾಡಿ ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ಶಾಲೆ, ಮನೆ, ಸೇರಿದಂತೆ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಸ್ವಚ್ಚತೆ ಮತ್ತು ಪರಿಸರ ಕಾಳಜಿಯನ್ನು ಬಾಲ್ಯದಲ್ಲೇ ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಶ್ರಮಿಸಬೇಕು ಎಂದರು.
ಮುಖ್ಯಶಿಕ್ಷಕ ಸತ್ಯನಾರಾಯಣ್, ಶಿಕ್ಷಕರಾದ ಆರ್.ಶಕುಂತಲಮ್ಮ, ಎಂ.ಮಹಾಲಕ್ಷ್ಮೀ, ನಿವೃತ್ತ ಮುಖ್ಯ ಶಿಕ್ಷಕ ಪಿ.ಬಿ.ನಂದವಾಡಗಿ ಸೇರಿದಂತೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.