ಬೆಂಗಳೂರು
ಸೀಳು ತುಟಿ ಸಮಸ್ಯಾತ್ಮಕ ಮಗುವಿನ ಮುಖದಲ್ಲಿ ನಗು ತರಿಸುತ್ತಿರುವುದು ಅತ್ಯಂತ ಸಾರ್ಥಕ ಕೆಲಸ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಭಾರತೀಯ ಆರ್ಥೊಡಾಂಟಿಕ್ ಸೊಸೈಟಿ ಮತ್ತು ಬೆಂಗಳೂರು ಆರ್ಥೊಡಾಂಟಿಕ್ ಗ್ರೂಪ್ ಸಹಯೋಗದಲ್ಲಿ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನಿಂದ ಆಯೋಜಿಸಲಾಗಿದ್ದ ಸೀಳು ಮತ್ತು ಕ್ರಾನಿಯೋಫೇಶಿಯಲ್ ಆರ್ಥೊಡಾಂಟಿಕ್ಸ್ ರಾಷ್ಟ್ರೀಯ ಸಮ್ಮೇಳನ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೀಳು ತುಟಿ ಸಮಸ್ಯೆ ಇರುವವರ ಜೀವನದಲ್ಲಿ ಸುಧಾರಣೆ ತರುವುದು ಅತ್ಯಂತ ಮಹತ್ವದ ಕೆಲಸ. ಇಂತಹ ಮಹತ್ಕಾರ್ಯದಲ್ಲಿ ವಿಭಿನ್ನ, ವಿಶೇಷ ತಜ್ಞರು ತಮ್ಮ ಜ್ಞಾನ ಮತ್ತು ಅನುಭವವನ್ನು ಧಾರೆ ಎರೆದಿದ್ದು, ದೇಶ ? ವಿದೇಶಗಳ ವಿವಿಧ ಆರೋಗ್ಯ ಪ್ರಕಾರದ ತಜ್ಞರು ಭಾಗಿಯಾಗಿರುವುದು ವಿಶೇಷ ಎಂದರು.
ಹುಟ್ಟಿನಿಂದಲೇ ಸೀಳು ತುಟಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇದು ದೈಹಿಕ ವೈಪರೀತ್ಯ ಮಾತ್ರವಲ್ಲ, ಇದಕ್ಕಿಂತ ಹೆಚ್ಚಾಗಿ ಈ ಸಮಸ್ಯೆ ಅವರ ಜೀವನದ ಮೇಲೆ ಭಾವನಾತ್ಮಕ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿ 700 ಮಕ್ಕಳಲ್ಲಿ 1 ಸೀಳು ತುಟಿ ಸಮಸ್ಯೆಯಿಂದ ಹುಟ್ಟುತ್ತದೆ.
ನಮ್ಮ ದೇಶದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳು ಇಂತಹ ಸಮಸ್ಯೆ ಹೊತ್ತು ಜನಿಸುತ್ತಾರೆ ಭಾರತದಲ್ಲಿಯೂ ಸೀಳು ತುಟಿ ಸಮಸ್ಯೆ ಉಳ್ಳವರಿದ್ದು, ಜನ್ಮತಃ ಉಂಟಾಗುವ ಇಂತಹ ಸಮಸ್ಯೆಗಳಿಗೆ ಆಧುನಿಕ ಚಿಕಿತ್ಸೆ ಜೊತೆಗೆ ಮಾನವೀಯತೆಯಿಂದ ಸೇವೆ ಸಲ್ಲಿಸಲು ವೈದ್ಯಕೀಯ ಸಮೂಹ ಸನ್ನದ್ಧವಾಗಿರುವುದು ಗಮನಾರ್ಹವಾದದ್ದು. ಇದು ನಿಜಕ್ಕೂ ದೈವಿಕ ಸೇವೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.
ದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮತ್ತು ಕುಲಪತಿ ಡಾ. ಹೇಮಚಂದ್ರ ಸಾಗರ್ ಮಾತನಾಡಿ, ಅತ್ಯುನ್ನತ ಕೌಶಲ್ಯ ಹೊಂದಿರುವ ಪರಿಣಿತರ ಸಮ್ಮುಖದಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದ್ದು, ಇದು ಮುಂದಿನ ಭವಿಷ್ಯಕ್ಕೆ ಮುನ್ನುಡಿಯಾಗಲಿದೆ. ಬರುವ ದಿನಗಳಲ್ಲಿ ವಿಶೇಷ ಚೇತನರಿಗೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದರು.
ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ಅಧ್ಯಕ್ಷ ಡಾ. ಬಲ್ವಿಂದರ್ ಸಿಂಗ್ ಠಕ್ಕರ್ ಮಾತನಾಡಿ, ಮಗು ಹುಟ್ಟಿದಾಗಲೇ ಚಿಕಿತ್ಸೆ ನೀಡಿದರೆ ಮುಖ ವಿರೂಪವಾಗುವುದನ್ನು ತಡೆಗಟ್ಟಬಹುದಾಗಿದೆ. ಮಕ್ಕಳ ತಜ್ಞರು, ವಾಕ್ ಶ್ರವಣ ತಜ್ಞರ ನೆರವಿನಿಂದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲಾಗುತ್ತಿದೆ ಎಂದರು.
ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಡಾ. ಹೇಮಂತ್ ಮಾತನಾಡಿ, ಸೀಳು ತುಟಿ ಸಮಸ್ಯೆಗಳಿಗೆ ಬಹುತೇಕ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಹೆಣ್ಣು ಮಕ್ಕಳು ಗರ್ಭ ಧರಿಸುವ ಸಂದರ್ಭದಲ್ಲಿ ಧೂಮಪಾನ ಮತ್ತು ಮದ್ಯಪಾನ ತಡೆಗಟ್ಟುವ ಜೊತೆಗೆ ಫೋಲಿಕ್ ಆಸಿಡ್ ಸಮ ಪ್ರಮಾಣದಲ್ಲಿದ್ದರೆ ಸಮಸ್ಯೆಯನ್ನು ತಡೆಗಟ್ಟಬಹುದು.
ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ಕಾರ್ಯದರ್ಶಿ ಡಾ. ಸಂಜಯ್ ಲಾಭ್, ದಯಾನಂದ ಸಾಗರ್ ಸಂಸ್ಥೆಗಳ ಕಾರ್ಯದರ್ಶಿ ಗಾಲಿಸ್ವಾಮಿ ಮತ್ತು ಜಂಟಿ ಕಾರ್ಯದರ್ಶಿ ಟಿಂಟಿಶಾ ಎಚ್. ಸಾಗರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ