ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿವೀಕ್ಷಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ

ತುಮಕೂರು

     ಶನಿವಾರ ಮಧ್ಯಾಹ್ನ ಸಿಟಿ ರೌಂಡ್ಸ್ ಹಾಕಿ ಸ್ಮಾರ್ಟ್ಸಿಟಿಯ ಪ್ರಮುಖ ಕಾಮಗಾರಿಗಳನ್ನು ಪರಿವೀಕ್ಷಿಸಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಮೊದಲಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ವೀಕ್ಷಿಸಿ ಕಾಮಗಾರಿಯನ್ನು ನವೆಂಬರ್ ತಿಂಗಳೊಳಗೆ ಪೂರೈಸಲು ಗಡುವು ನೀಡಿದರು.

     ಶಾಸಕ ಜಿ.ಬಿ.ಜ್ಯೋತಿಗಣೇಶ್, ಡಿಸಿ ಆರ್.ಶ್ರೀನಿವಾಸ್, ಜಿಪಂ ಸಿಇಓ ಪ್ರಭು, ಮೇಯರ್ ಪ್ರಭಾವತಿ, ಸ್ಮಾರ್ಟ್ಸಿಟಿ ಎಂಡಿ ರಂಗಸ್ವಾಮಿ ಇತರ ಇಲಾಖೆ ಅಧಿಕಾರಿಗಳೊಂದಿಗೆ ಮೊದಲಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಸಚಿವರು, ಸುಮಾರು 98 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಬಸ್ ನಿಲ್ದಾಣ ಕಾಮಗಾರಿ ಕಳೆದ ವರ್ಷವೇ ಕಾಮಗಾರಿ ಮುಗಿಯಬೇಕಿತ್ತು. ಆದರೆ ವಿಳಂಬವಾಗಿದೆ. ಇನ್ನೆರೆಡು ಮೂರುತಿಂಗಳಲ್ಲಿ ಗುಣಮಟ್ಟದಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಶಾಸಕರು, ಅಧಿಕಾರಿಗಳು ಮಾನಿಟರಿಂಗ್ ಮಾಡುವರು ಎಂದರು.

    ನಂತರ ನಗರದ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿರುವ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದ ಅವರು. ರಿಜಿಸ್ಟರ್ ನೋಂದಣಿಯಲ್ಲಿ ಪುಸ್ತಕಗಳ ಬಗ್ಗೆ ಸರಿಯಾಗಿ ದಾಖಲಾತಿ ಮಾಡಿಲ್ಲವೆಂದು ಗ್ರಂಥಾಲಯ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪುಸ್ತಕಗಳು ಲಭ್ಯವಿರುವ ಬಗ್ಗೆ ಎಲ್‌ಇಡಿ ಮೂಲಕ ಪುಸ್ತಕಗಳ ವಿವರವನ್ನು ಪ್ರದರ್ಶಿಸಬೇಕು, ಗ್ರಂಥಾಲಯದಲ್ಲಿರುವ ಎರಡು ಲಕ್ಷ ಪುಸ್ತಕಗಳು ಕಂಪ್ಯೂಟರ್‌ನಲ್ಲಿ ಗಣಕೀರಣವಾಗಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬೆಳಿಗ್ಗೆ 8 ರಾತ್ರಿ 8 ಗಂಟೆಯವರೆಗೆ ಗ್ರಂಥಾಲಯವನ್ನು ತೆರೆದಿರಬೇಕೆಂದು ಗ್ರಂಥಾಲಯ ಉಪನಿರ್ದೇಶಕರಿಗೆ ಸೂಚಿಸಿದರು.

    ಬಳಿಕ ಸರ್ಕಾರಿ ಹೈಸ್ಕೂಲ್ ಮೈದಾನದ ಸ್ಪೋರ್ಟ್ಸ್ ಅರೇನಾ, ಬಯಲು ರಂಗಮAದಿರ ವೀಕ್ಷಿಸಿದ ಸಚಿವರು, ತುಮಕೂರು ಜಿಲ್ಲೆಯು ಖೋಖೋ, ಕಬಡ್ಡಿ ಕ್ರೀಡೆಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಕ್ರೀಡಾಂಗಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೂನಿಯರ್ ಕಾಲೇಜ್ ಮೈದಾನವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. 1927ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರು. ನೆಹರು ಅವರು ಕೂಡ ಈ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಕುರಿತು ಭಾಷಣ ಮಾಡಿದ್ದಾರೆ ಎಂದು ಸ್ಮರಿಸಿದರು.

   ಕ್ರೀಡಾಪಟುಗಳೊಂದಿಗೆ ಸಮಾಲೋಚನೆ: ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿಂಥೆಟಿಕ್ ಟ್ರ್ಯಾಕ್ ಮತ್ತಿತರ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿದ ಸಚಿವರು, ತದ ನಂತರ ಅಲ್ಲೇ ನೆರೆದಿದ್ದ ಕ್ರೀಡಾಪಟುಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಶೂಟಿಂಗ್ ಸ್ಪರ್ಧೆಯಲ್ಲಿ ತುಮಕೂರು ನಗರದಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಟೀ-ಶರ್ಟ್ ವಿತರಿಸಿ ಅಭಿನಂದಿಸಿದರು.

     ಈ ವೇಳೆ ಮಾತನಾಡಿದ ಸಚಿವರು ನಗರದಲ್ಲಿದ್ದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಈ ಹಿಂದೆ ಕ್ರೀಡೆಗಳನ್ನು ನಡೆಸುವ ಬದಲು ರಾಜಕೀಯ ಗಣ್ಯರಿಗೆ ಹೆಲಿಕ್ಯಾಪ್ಟರ್ ಲ್ಯಾಂಡಿAಗ್ ಮಾಡಲು ಈ ಕ್ರೀಡಾಂಗಣವನ್ನು ಬಳಸಲಾಗುತ್ತಿತ್ತು. ತದನಂತರ ನಗರ ಬೆಳೆಯುವ ಹಾಗೆ ಕ್ರೀಡಾಂಗಣವನ್ನು ಉನ್ನತೀಕರಿಸುವುದಕ್ಕಾಗಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ. ಶೀಘ್ರ ಸಕ್ಷಮ ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಗುವುದು ಎಂದು ತಿಳಿಸಿದರು.    

     ಸ್ಮಾರ್ಟ್ಸಿಟಿ ಯೋಜನೆಯಡಿ 932 ಕೋಟಿ ವೆಚ್ಚದ 173 ಕಾಮಗಾರಿಯನ್ನು ಕೈಗೊಂಡಿದ್ದು, ಈವರೆಗೆ 773 ಕೋಟಿ ಹಣ ಖರ್ಜಾಗಿದೆ. ಇನ್ನೂ ಕಾಮಗಾರಿಗಳ ಕುರಿತು ಸಾರ್ವಜನಿಕರಿಂದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದಿವೆ. ಈ ಬಗ್ಗೆಂ ಕೂಲಂಕಶ ಪರಿಶೀಲನೆ ಮಾಡಲಾಗುವುದು ಎಂದ ಸಚಿವರು,ಸ್ಟೇಡಿಯಂ ಉದ್ಘಾಟನಾ ಫಲಕದಲ್ಲಿ ತಮ್ಮ ಹೆಸರು ಕೈ ಬಿಟ್ಟಿರುವ ಕುರಿತು ಹಿಂದಿನ ಸರ್ಕಾರ ಈ ವಿಷಯದಲ್ಲಿ ಸಣ್ಣತನ ಪ್ರದರ್ಶಿಸಿದೆ ಎಂದರು.

     52 ಸಾವಿರ ಕೋಟಿ ಮೊತ್ತದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಈ ವರ್ಷ ಆದ್ಯತೆ ನೀಡಿದ್ದು, ಹೊಸ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಈ ಬಾರಿ ಬಿಡುಗಡೆ ಮಾಡಲು ಆಗಿಲ್ಲ. ಮುಂದಿನ ವರ್ಷದ ಬಜೆಟ್‌ನಲ್ಲಿ ವಸಂತಾ ನರಸಾಪುರದವರೆಗೆ ಮೆಟ್ರೊ ತರುವ ಯೋಜನೆಗೆ ಅನುದಾನ ಲಭ್ಯವಾಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

    ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಎಂಜಿ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಸವರಾಜಬೊಮ್ಮಾಯಿ ಅವರು ಮಂಡಿಸಿದ ಆಯವ್ಯಯ ವಾರ್ಷಿಕ ಬಜೆಟ್‌ಆಗಿದ್ದು, ನಮ್ಮ ಸರ್ಕಾರ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿಗಳನ್ನು ಹಣವನ್ನು ಹೊಂದಿಸಿ ಮಧ್ಯಂತರ ಬಜೆಟ್ ಮಂಡಿಸಿದ್ದು, ಅಧಿವೇಶನದ ಬಳಿಕ ಹಳೆ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

    ವಸಂತ ನರಸಾಪುರದವರೆಗೆ ಮೆಟ್ರೋ ತರುವ ಯೋಜನೆಯನ್ನು ಪಿಪಿಪಿ ಮಾಡೆಲ್‌ನಲ್ಲಿ ಅನುಷ್ಠಾನಕ್ಕೆ ತರಲಿದ್ದು, ಡಿಸೆಂಬರ್‌ವೇಳೆಗೆ ಡಿಪಿಆರ್ ತಾಂತ್ರಿಕ ವರದಿ ಸಿದ್ದವಾಗಲಿದೆ. ಮುಂದಿನ ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದರು.

    ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 5.91 ಲಕ್ಷ ಪಡಿತರ ಚೀಟಿಗಳ 2.22 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ರ‍್ಯಾಯವಾಗಿ ಹಣವನ್ನು ನೇರ ನಗದು ವರ್ಗಾವಣೆ ಮಾಡಲು 39 ಕೋಟಿ ಬಿಡುಗಡೆಯಾಗಿದೆಎಂದ ಸಚಿವ ಪರಮೇಶ್ವರ ಅವರು ಜಿಲ್ಲೆಗೆ ಈವರೆಗೆ 160 ಎಂಸಿಎಫ್‌ಟಿಯಷ್ಟು ನೀರು ಹರಿದಿದೆ. ಮುಂದಿನ ಐದು ತಿಂಗಳ ಕಾಲ ನೀರಿಗೆ ತೊಂದರೆಯಿಲ್ಲ ಎಂದು ನುಡಿದರು.

ಕೃತ್ಯವೆಸಗಿದವರ ಶೀಘ್ರ ಬಂಧನ:

     ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯಿಸಿ, ರಾಜ್ಯದ ಜನತೆ ಕಾಂಗ್ರೆಸ್‌ ಗೆ 136 ಸ್ಥಾನ ನೀಡಿದ್ದಾರೆ. ಆ ಜೋಶ್‌ನಲ್ಲಿ ನಾವು ಸರ್ಕಾರವನ್ನು ಗ್ಯಾರಂಟಿಗಳ ಅನುಷ್ಠಾನದೊಂದಿಗೆ ಜನಪರವಾಗಿ ಮುನ್ನೆಡೆಸುತ್ತಿದ್ದೇವೆ. ಜೈನಮುನಿಹತ್ಯೆ ಬೆಂಗಳೂರಿನ ಜೋಡಿಕೊಲೆ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳನ್ನು ಶೀಘ್ರ ಆರೋಪಿಗಳನ್ನು ಸೆರೆಹಿಡಿದಿದ್ದು, ಬಿಜೆಪಿಯವರ ಆಡಳಿತದಲ್ಲಿ ಏಕೆ ಪ್ರಕರಣಗಳನ್ನು ಬೇಗ ಬೇಧಿಸುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು.

      ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಪ್ರಭು, ಮೇಯರ್ ಪ್ರಭಾವತಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ತಹಸೀಲ್ದಾರ್ ಸಿದ್ದೇಶ್, ಪಾಲಿಕೆ ಸದಸ್ಯರಾದ ಜೆ.ಕುಮಾರ್, ಟಿ.ಎಂ.ಮಹೇಶ್, ರೂಪಶ್ರೀಶೆಟ್ಟಾಳಯ್ಯ ಸೇರಿದಂತೆ ಪಾಲಿಕೆ, ಟೂಡಾ ಸ್ಮಾರ್ಟ್ಸಿಟಿ ಅಧಿಕಾರಿಗಳು ಹಾಜರಿದ್ದರು. ತದನಂತರ ಸಚಿವರು ಕ್ರೀಡಾಂಗಣದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap