ಹಿಂದುಸ್ಥಾನ ಇನ್‍ಫ್ರಾಕಾನ್ ಕಂಪನಿಯಿಂದ ಮಹಿಳೆಯರಿಗೆ ಮೋಸ

ಕುಣಿಗಲ್

   ಹಿಂದೂಸ್ಥಾನ್ ಇನ್‍ಫ್ರಾಕಾನ್ ಪ್ರೈ.ಲಿ. ಹಾಗೂ ಪಿಎಸಿಎಲ್ ಕಂಪನಿಗಳು ಸ್ಥಳೀಯ ಏಜೆಂಟರ್‍ಗಳ ಮೂಲಕ ನೂರಾರು ಕೂಲಿ ಕಾರ್ಮಿಕರಿಗೆ, ರೈತ ಮಹಿಳೆಯರಿಂದ ಹಣ ದ್ವಿಗುಣ ಮಾಡಿಕೊಡುವ ಆಸೆಯನ್ನುಟ್ಟಿಸಿ ಮಾಸಿಕ ಕಂತು ಸೇರಿದಂತೆ ಲಕ್ಷಾಂತರ ಠೇವಣಿ ಇಟ್ಟುಕೊಂಡು ವಾಯಿದೆ ಮುಗಿದರೂ ಹಣ ನೀಡದೆ ಇರುವುದನ್ನು ಖಂಡಿಸಿ ನೂರಾರು ಮಹಿಳೆಯರು ಪೊಲೀಸರಿಗೆ ದೂರು ನೀಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸಿದ್ದರಾಮಯ್ಯನಪಾಳ್ಯ ಗ್ರಾಮದ ಮಹಿಳೆಯರು ಹಾಗೂ ಪುರುಷರು ಈ ಕಂಪನಿಗಳ ಹೆಸರೇಳಿಕೊಂಡು ಬಂದು ಅದೇ ಗ್ರಾಮದ ಅಂಗನವಾಡಿ ಶಿಕ್ಷಕಿ ಇಂದ್ರಮ್ಮ ಗಂಡ ಶಂಕರಯ್ಯ, ಮಗ ಯೋಗೇಶ್ ಎಂಬುವರ ಕಡೆ ತಿಂಗಳಿಗೆ ಒಬ್ಬೊಬ್ಬರು 500ರೂ, 1000ರೂ, 3000ರೂಗಳಂತೆ ಕಂತು ಕಟ್ಟುತ್ತಿದ್ದೆವು ಎಂದು ಆರೋಪಿಸಿರುವ ಕೆಂಪಮ್ಮ ಗಂಗಬೋರಯ್ಯ, ಬೋರಮ್ಮ, ಚಿಕ್ಕಮ್ಮ, ಶಿವಮ್ಮ, ನಾಗಮ್ಮ, ಯಶೋದಮ್ಮ ಸೇರಿದಂತೆ ಹಲವರು ಗುರುವಾರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ತಾಲ್ಲೂಕು ಕಚೇರಿಯ ಮರದಕೆಳಗೆ ಕುಳಿತು ಹಿಡಿ ಶಾಪಹಾಕುತ್ತ ಪತ್ರಕರ್ತರಿಗೆ ತಮ್ಮ ಅಳಲನ್ನ ತೋಡಿಕೊಂಡರು.

      ಹಿಂದೂಸ್ಥಾನ್ ಇನ್‍ಫ್ರಾಕಾನ್ ಪ್ರೈ.ಲಿ.ಕಂಪನಿಯವರು ಹೆಚ್ಚಿನ ಬಡ್ಡಿ ಹಣವನ್ನ ನೀಡುವ ಭರವಸೆಯನ್ನ ಏಜೆಂಟರ್‍ಗಳಿಗೆ ತುಂಬಿ ಅವರ ಮೂಲಕ ಲಕ್ಷಾಂತರ ರೂ. ಹಣವನ್ನ ಕಟ್ಟಿಸಿಕೊಂಡಿದ್ದರು. ಠೇವಣಿವಾಯಿದೆ 5 ವರ್ಷಕ್ಕೆ ಇಟ್ಟಿದ್ದು ಈಗಾಗಲೇ 7 ವರ್ಷ ತುಂಬಿದರೂ ಇನ್ನೂ ನಮ್ಮ ಹಣವನ್ನು ಬಡ್ಡಿ ಸಮೇತವಾಗಿ ಹಿಂದಿರುಗಿಸಿಲ್ಲ ಎಂದು ತಮ್ಮ ಆಕ್ರೋಶವನ್ನ ತೋಡಿಕೊಂಡ ಅವರು ಸರ್ಕಾರಿ ಕೆಲಸ ಮಾಡುತ್ತಿದ್ದ ಇಂದ್ರಮ್ಮ ಅವರ ಮಾತಿಗೆ ಬೆಲೆಕೊಟ್ಟು ನಾವು ಹಣವನ್ನು ಕಟ್ಟಿದ್ದೇವೆ.

     ಈಕೆ ಏನಾದರೂ ಸರಿಯೇ ನನ್ನ ಜವಾಬ್ದಾರಿ ನಾನು ನಿಮ್ಮ ಹಣವನ್ನು ಕೊಡಿಸುತ್ತೇನೆ ಎಂದು ನಂಬಿಸಿದ್ದರಿಂದ ನಾವು ಈ ಕಂಪನಿಗಳಿಗೆ ಹಣಕಟ್ಟಿದ್ದೆವು. ಆದರೆ ಈಗ ನಮಗೆ ಗಂಟು ಇಲ್ಲಾ ನಂಟು ಇಲ್ಲ ಎಂಬಂತಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡ ಮಹಿಳೆಯರು, ಈಗ ಹಣ ಕೇಳಿದರೆ ನಮ್ಮ ಮೇಲೆ ದೂರು ನೀಡುವುದಾಗಿ ಹೆದರಿಸುತ್ತಾರೆ.

      ಅಲ್ಲದೆ ಲಕ್ಷಾಂತರ ಹಣವನ್ನ ಜನರಿಂದ ವಸೂಲಿಮಾಡಿ ಕಟ್ಟಿರುವ ಇವರು ವಾಯಿದೆ ಮುಗಿದು 7-8ವರ್ಷವಾದರೂ ಹಣ ಹಿಂದಿರುಗಿಸಿ ಕೊಡದೆ ಬರೀ ಸಬೂಬು ಹೇಳುತ್ತಿದ್ದಾರೆ. ಹಣ ಕೇಳಲು ಹೋದರೆ ಬರೀ ಸಬೂಬು ಹೇಳುತ್ತಲೆ ಬಂದಿರುವ ಇವರು ಸೈಟು, ಮನೆ, ಕಾರು ಮಾಡಿಕೊಂಡು ಉತ್ತಮ ಜೀವನ ಮಾಡುತ್ತಿದ್ದಾರೆ. ಕೂಲಿ ಮಾಡಿ ಉಳಿಸಿಟ್ಟ ಹಣವನ್ನ ಇವರಿಗೆ ಕೊಟ್ಟು ಈಗ ನಮ್ಮ ಹಣವನ್ನ ಕೊಡಿಸಿ ಎಂದು ಭಿಕ್ಷೆ ಬೇಡುವಂತಾಗಿದೆ. ಹೀಗೆ ನಂಬಿಸಿ ಮೋಸಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಮುಂದೆ ನಾವು ಮನವಿ ಮಾಡಕೊಳ್ಳುತ್ತೇವೆ ಎಂದು ವಯೋವೃದ್ಧರೂ ಸೇರಿದಂತೆ ಹಲವು ಮಹಿಳೆಯರು ತಮ್ಮ ದುಃಖವನ್ನ ತೋಡಿಕೊಂಡ ಪ್ರಸಂಗ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link