ಹೈದರಾಬಾದ್:
ತೆಲಂಗಾಣದಲ್ಲಿ ದಿ ರಾಮೇಶ್ವರಂ ಕೆಫೆ ಸೇರಿದಂತೆ ಹಲವು ಹೊಟೆಲ್ ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದು, ಈ ವೇಳೆ ಅವಧಿ ಮೀರಿದ ಆಹಾರೋತ್ಪನ್ನಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್ ಪ್ರತಿಷ್ಠಿತ ಹೊಟೆಲ್ ಗಳ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಹೈದರಾಬಾದ್ ನ ಸಂಜೀವರೆಡ್ಡಿ ನಗರದಲ್ಲಿರುವ ಹೊಟೆಲ್ ಸಾಯಿ ಬೃಂದಾವನ್, ಉಪ್ಪಾಲ್ ನಲ್ಲಿರುವ ಮಾಸ್ಟರ್ ಚೆಫ್ ರೆಸ್ಟೋರೆಂಟ್, KFC, ಸೋಮಾಜಿಗೂಡದಲ್ಲಿರುವ ಕೃತುಂಗಾ ದಿ ಪಾಳೇಗಾರ್ಸ್ ಕ್ಯುಸಿನ್ ಹೊಟೆಲ್, ಬಂಜಾರ್ ಹಿಲ್ಸ್ ನಲ್ಲಿರುವ ಬಾಸ್ಕಿನ್ ರಾಬಿನ್ಸ್, ಮಾಧಾಪುರ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ ಸೇರಿದಂತೆ ಹಲವು ಹೊಟೆಲ್ ಗಳ ಮೇಲೆ ದಾಳಿ ನಡೆಸಿದ್ದಾರೆ.ಈ ವೇಳೆ ಈ ಹೊಟೆಲ್ ಗಳಲ್ಲಿ ಅವಧಿ ಮೀರಿದ ಆಹೋರಾತ್ಪನ್ನಗಳು ಪತ್ತೆಯಾಗಿದ್ದು, ಮಾಧಾಪುರ್ ಪ್ರದೇಶದ ದಿ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಬೆಳೆ, ನಂದಿನಿ ಮೊಸರು, ಹಾಲು, ಅವಧಿಯೇ ಪ್ರಿಂಟ್ ಆಗದ ಅಕ್ಕಿ ಚೀಲಗಳು, ಬೆಲ್ಲ ಪತ್ತೆಯಾಗಿವೆ. ಈ ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹೊಟೆಲ್ ನಲ್ಲಿ ಸಿಬ್ಬಂದಿಗಳ ವೈದ್ಯಕೀಯ ಪ್ರಮಾಣ ಪತ್ರ ಕೂಡ ಇರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂತೆಯೇ ಇಲ್ಲಿನ ಪ್ರಖ್ಯಾತ ಬಾಹುಬಲಿ ಕಿಚನ್ ಹೊಟೆಲ್ ನಲ್ಲಿ ನಿಷೇಧಿತ ಸಿಂಥೆಟಿಕ್ ಫುಡ್ ಕಲರ್ ಗಳು ಪತ್ತೆಯಾಗಿದ್ದು, ಹೊಟೆಲ್ ನ ಅಡುಗೆಮನೆ ಮತ್ತು ಸ್ಟೋರ್ ರೂಮ್‌ನೊಳಗಿನ ಆಹಾರ ಪದಾರ್ಥಗಳ ಭಾರೀ ಜಿರಳೆಗಳು ಕಂಡುಬಂದಿದೆ. ಇಲ್ಲಿ ಕೀಟ ನಿಯಂತ್ರಣ ದಾಖಲೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎರಡು ಹೊಟೆಲ್ ಗಳು ಮಾತ್ರವಲ್ಲದೇ ಅಧಿಕಾರಿಗಳು ದಾಳಿ ನಡೆಸಿದ ಬಹುತೇಕ ಎಲ್ಲ ಹೊಟೆಲ್ ಗಳ ಪರಿಸ್ಥಿತಿ ಇದೇ ಆಗಿದ್ದು, ಅವಧಿ ಮೀರಿದ ಆಹಾರೋತ್ಪನ್ನಗಳು, ಶುಚಿತ್ವ ಕೊರತೆ, ಸಿಬ್ಬಂದಿಗಳ ಸಮಸ್ಯೆಗಳಿಂದ ಕೂಡಿವೆ ಎಂದು ತೆಲಂಗಾಣ ಆಹಾರ ಸುರಕ್ಷತಾ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.