ಅಂಜನಾದ್ರಿ ಬೆಟ್ಟ ಹನುಮನ ಜನ್ಮಸ್ಥಳ: ನಂಬಿಕೆಗಿಂತ ಬೇರೆ ಪುರಾವೆ ಬೇಕಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

100 ಕೋಟಿ ರೂ. ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ : ರೋಪ್ ವೇಗೆ ಮಾಸ್ಟರ್ ಪ್ಲಾನ್

ಕೊಪ್ಪಳ/ಬೆಂಗಳೂರು : ಆಂಜನೇಯ ಹುಟ್ಟಿದ್ದು ಅಂಜನಾದ್ರಿ ಬೆಟ್ಟದಲ್ಲಿ ಎನ್ನುವುದಕ್ಕೆ ಐತಿಹಾಸಿಕವಾಗಿ ಸಾವಿರಾರು ವರ್ಷಗಳಿಂದ ಇದು ಕಿಷ್ಕಿಂದೆಯಾಗಿತ್ತು ಎನ್ನುವ ನಂಬಿಕೆಗಿಂತ ಇನ್ನೊಂದು ಪುರಾವೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಗಂಗಾವತಿಯಲ್ಲಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮಹತ್ವದ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಆಂಜನೇಯನ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿವೆ. ಮೂಲತಃ ಆಂಜನೇಯ ಹುಟ್ಟಿದ್ದು, ಅಂಜನಾದ್ರಿ ಬೆಟ್ಟದಲ್ಲಿಯೇ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿ ಬೆಟ್ಟವನ್ನು ಸ್ಥಳವನ್ನು ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ್ದೇವೆ. ಈ ಕುರಿತು ಕರ್ನಾಟಕ, ಆಂಧ್ರಪ್ರದೇಶ ಬೇರೆ ಬೇರೆಯಾಗಿ ಘೋಷಣೆ ಮಾಡಬೇಕಿಲ್ಲ. ಇಡೀ ಭಾರತವಾಸಿಗಳು ಈ ವಿಷಯವನ್ನು ನಂಬಿದ್ದಾರೆ ಹಾಗೂ ಎಲ್ಲರಿಗೂ ವಿಶ್ವಾಸವಿದೆ ಎಂದರು.

ಆರಾಧ್ಯ ದೈವ ಆಂಜನೇಯ ಸ್ವಾಮಿಯ ಜನ್ಮಸ್ಥಳದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಪ್ರತಿ ವರ್ಷ ಬಹಳಷ್ಟು ಯಾತ್ರಿಕರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಯಾಗಬೇಕು ಎಂಬ ಉದ್ದೇಶವಿದೆ. ಅಂಜನಾದ್ರಿ ಬೆಟ್ಟದ ಕೆಳಗೆ ಹಾಗೂ ಮೇಲೆಯೂ ಅಭಿವೃದ್ಧಿಯಾಗಬೇಕು ಎನ್ನುವ ಚಿಂತನೆಯಿಂದ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಆ ಪ್ರಕಾರ ಸರ್ಕಾರಿ ಆದೇಶವನ್ನೂ ಹೊರಡಿಸಲಾಗಿದೆ. ಯಾತ್ರಿಕರಿಗೆ ವಸತಿ, ಮಾರುಕಟ್ಟೆ , ಆಸ್ಪತ್ರೆ ಮುಂತಾದ ಎಲ್ಲ ರೀತಿಯ ಸವಲತ್ತುಗಳು ದೊರಕಬೇಕು ಮಾತ್ತು ರೋಪ್ ವೇ ನಿರ್ಮಿಸಿ ವಯಸ್ಸಾದವರಿಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಬೆಳೆಸಬೇಕು ಎನ್ನುವ ಪರಿಕಲ್ಪನೆಯಿಂದ ಸ್ಥಳ ವೀಕ್ಷಣೆ ಮಾಡಲಾಗುತ್ತಿದೆ ಎಂದರು.

ಪ್ರವಾಸೋದ್ಯಮ ಸರ್ಕಿಟ್ : ರೋಪ್ ವೇಗೆ ಟೆಂಡರ್ ಕರೆಯಲು ಸೂಚಿಸಲಾಗಿದೆ. ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳ ಅಭಿವೃದ್ಧಿಯಾಗಬೇಕು. ಕರ್ನಾಟಕದಲ್ಲಿ ಮೈಸೂರು ಮತ್ತು ಹಂಪಿ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಸರ್ಕಿಟ್ ರೂಪಿಸಲು ಆದೇಶ ಹೊರಡಿಸಿದೆ. ಪುರಾತತ್ವ ಇಲಾಖೆಗೆ ಒಳಪಡುವ ಸ್ಥಳಗಳನ್ನು ಹೊರತುಪಡಿಸಿ ಹಂಪಿಯ ಸುತ್ತಮುತ್ತಲ ಪ್ರದೇಶಗಳು ಹಾಗೂ ಊರುಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಸೂಚಿಸಿದೆ. ಐತಿಹಾಸಿಕ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಲು ಬಜೆಟ್ ನಲ್ಲಿ ಅನುದಾನ ನೀಡಲಾಗಿದೆ. ಈಗ ಕಾರ್ಯಕ್ರಮ ಪ್ರಾರಂಭಲಾಗುವುದು ಎಂದರು.

ಸಾವಿರಾರು ಭಕ್ತರು ಭೇಟಿ: ನಿತ್ಯ ಅಂಜನಾದ್ರಿ ಬೆಟ್ಟದಲ್ಲಿನ ಅಂಜನೇಯನ ದರ್ಶನಕ್ಕೆ 5 ಸಾವಿರ ಜನರು ಬರುತ್ತಿದ್ದಾರೆ. ವಾರಂತ್ಯದಲ್ಲಿ 25 ಸಾವಿರದಷ್ಟು ಜನರಿದ್ದರೇ ಹಬ್ಬ-ಹರಿದಿನಗಳ ಸಂದರ್ಭದಲ್ಲಿ 50 ಸಾವಿರದಷ್ಟು ಜನರು ದರ್ಶನಕ್ಕೆ ಬರುತ್ತಿದ್ದಾರೆ. ಅವರೆಲ್ಲರಿಗೂ ಅಗತ್ಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಕಲ್ಪಿಸುವುದು ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಮೂಲಭೂತ ಸೌಲಭ್ಯಗಳಿಗೆ ಮೊದಲು ಆದ್ಯತೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯ್ತು. ಇನ್ನೂ ಭೂಸ್ವಾಧೀನಕ್ಕೆ ಹೆಚ್ಚು ಹಣ ಖರ್ಚಾಗಲಿದೆ. ಉಳಿದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯ್ತು.

ಅಂಜನಾದ್ರಿ ಬೆಟ್ಟದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಕೆಳಕಂಡ ಸೂಚನೆಗಳನ್ನು ನೀಡಿದರು.

• ಅಂಜನಾದ್ರಿ ಬೆಟ್ಟದ ಕ್ಷೇತ್ರಕ್ಕೆ ಯಾತ್ರಿಕರು ಅವರಿಗೆ ವಸತಿ ಹಾಗೂ ಇತರ ಸೌಲಭ್ಯಗಳನ್ನು ಪೂರೈಸಬೇಕು. 100 ಕೋಟಿ ರೂ. ವೆಚ್ಚದಲ್ಲಿ 600 ಕೊಠಡಿಗಳ ಯಾತ್ರಿನಿವಾಸ, ಆಸ್ಪತ್ರೆ, ಶೌಚಾಲಯಗಳ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು.

• ಈ ಉದ್ದೇಶಕ್ಕಾಗಿ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಂಡು 2 ತಿಂಗಳ ಅವಧಿಯಲ್ಲಿ ಕಾಮಗಾರಿಯ ವಿನ್ಯಾಸವನ್ನು ಸಿದ್ಧಪಡಿಸಿ, ಅನುಮೋದನೆಯನ್ನು ಪಡೆದುಕೊಳ್ಳಬೇಕು.

• ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಕ್ರಮ ತೆಗೆದುಕೊಂಡು ಈ ಬಗ್ಗೆ ಸ್ಥೂಲವಾದ ವರದಿಯನ್ನು ಸಲ್ಲಿಸಬೇಕು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ 24 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನವನ್ನೂ ನೀಡಲಾಗುವುದು.

• ವಾಹನ ನಿಲುಗಡೆ ವ್ಯವಸ್ಥೆಗೆ ಕನಿಷ್ಟ 35 ಎಕರೆ ಪ್ರದೇಶ ಅಗತ್ಯವಿದ್ದು, ಮೊದಲನೇ ಹಂತದಲ್ಲಿ ಕನಿಷ್ಟ 20 ಎಕರೆ ಪಾಕಿರ್ಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು.

• ಈ ಯೋಜನೆಯಡಿಯಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಗಾಗಿ ಎಲ್ಲ ಕ್ರಮ ಕೈಗೊಳ್ಳಬೇಕು.

• ಈ ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಹಳಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗಿದ್ದರೂ, ನಿರ್ವಹಣೆ ಇರುವುದಿಲ್ಲ. ಮೊದಲ ದಿನದಿಂದಲೇ ನಿರ್ವಹಣೆ ಹಾಗೂ ಸ್ವಚ್ಛತಾ ಸೇವೆಯನ್ನು ಏಜೆನ್ಸಿಯಿಂದ ಪಡೆಯಬಹುದಾಗಿದೆ.

• ರಾಷ್ಟ್ರೀಯ ಹೆದ್ದಾರಿಯಿಂದ ಹಾಗೂ ಗಂಗಾವತಿಯಿಂದ ಸಂಪರ್ಕ ಕಲ್ಪಿಸಬಹುದಾಗಿದ್ದು, ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು. ಯಾತ್ರಿನಿವಾಸದ ನಿರ್ಮಾಣದ ಜೊತೆಜೊತೆಯಲ್ಲಿಯೇ ರಸ್ತೆ ನಿರ್ಮಾಣ ಕಾಮಗಾರಿಯೂ 7-8 ತಿಂಗಳಲ್ಲಿ ಪೂರ್ಣಗೊಳ್ಳಬೇಕು.

• ಅಂಜನಾದ್ರಿ ಕ್ಷೇತ್ರಕ್ಕೆ ಯಾತ್ರಿಕರ ಭೇಟಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

• ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಮುಂದಿನ ಎರಡು ತಿಂಗಲ್ಲಿ ಭೂ ಸ್ವಾಧೀನ ಕಾರ್ಯಗಳು ಮುಗಿದು, 2 ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ನಾಲ್ಕು ತಿಂಗಳೊಳಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕು. ಕಾಮಗಾರಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಿ ಅದರಂತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಭೂಸ್ವಾಧೀನಕ್ಕಾಗಿ 24 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು ಅತಿಶೀಘ್ರದಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

ಬಿಗಿ ಪೊಲೀಸ್ ಭದ್ರತೆ: ಅಂಜನಾದ್ರಿ ಬೆಟ್ಟಕ್ಕೆ ಮುಖ್ಯಮಂತ್ರಿಗಳು ಭೇಟಿ ಹಿನ್ನೆಲೆ ಪೆÇಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಮುಖ್ಯಮಂತ್ರಿಗಳು ಬಂದು ಹೋಗುವ ತನಕ ಮುನಿರಾಬಾದ್- ಗಂಗಾವತಿ ರಸ್ತೆ ಸಂಚಾರ ರದ್ದುಪಡಿಸಿ. ಬಿಗಿ ಭದ್ರತೆಗಾಗಿ ಪೆÇಲೀಸ್ ಅಧಿಕಾರಿಗಳು ಸೇರಿದಂತೆ 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿತ್ತು.

ಸಭೆಯಲ್ಲಿ ಸಚಿವರಾದ ಹಾಲಪ್ಪ ಆಚಾರ್, ಬೈರತಿ ಬಸವರಾಜ್, ಡಾ. ಕೆ ಸುಧಾಕರ್, ಶಶಿಕಲಾ ಜೊಲ್ಲೆ, ಆನಂದ ಸಿಂಗ್ , ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೆಸುಗೂರ, ಕೊಪ್ಪಳ ಜಿಲ್ಲಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap