ಅಂತಃಕರಣ ಕೆಡದಿದ್ದರೆ ಹೊರ ಜಗತ್ತು ಕೆಡುವುದಿಲ್ಲ

ಚಿತ್ರದುರ್ಗ:

         ಮನುಷ್ಯನ ಅಂತಃಕರಣ ಕೆಡದಿದ್ದರೆ ಹೊರಗಿನ ಜಗತ್ತು ಕೆಡುವುದಿಲ್ಲ. ಒಳ್ಳೆಯ ಸಂಸ್ಕಾರದಿಂದ ಅಂತಃಕರಣದ ಕೊಳೆಯನ್ನು ತೊಳೆಯಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಹೇಳಿದರು.

         ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 89 ನೇ ಮಹಾಶಿವರಾತ್ರಿ ಮಹೋತ್ಸವದ ಎರಡನೆ ದಿನದ ಶುಕ್ರವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

          ಜಗತ್ತಿಗೆ ಬಂದ ಮೇಲೆ ಸರಿಯಾದ ರೀತಿಯಲ್ಲಿ ಬದುಕಲು ಅವಕಾಶವಿದೆ. ಸರಳತೆ ಎನ್ನುವುದು ಜೀವನದಲ್ಲಿ ಬಹಳ ಕಷ್ಟವಾದುದು. ಸರಳತೆಗೆ ಹೆಚ್ಚಿನ ಶಕ್ತಿಯಿದೆ. ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳ ಸರಳತೆ ಹಾಗೂ ಮುಗ್ದತೆಯನ್ನು ಮೆಚ್ಚಿಕೊಂಡು ಪ್ರತಿವರ್ಷವೂ ಕಬೀರಾಂದಾಶ್ರಮದ ಮಹಾಶಿವರಾತ್ರಿ ಮಹೋತ್ಸವಕ್ಕೆ ಆಗಮಿಸುತ್ತಿದ್ದೇನೆ. ಸಂಸಾರ ಇರುವ ಕಡೆ ಸಂತಾಪವಿರುತ್ತದೆ. ಇಡೀ ಜಗತ್ತೆ ಒಂದು ರೀತಿಯ ಸಂಸಾರವಿದ್ದಂತೆ ಎಂದು ತಿಳಿಸಿದರು.

          ಪ್ರತಿ ವರ್ಷವೂ ಕಬೀರಾನಂದಾಶ್ರಮ ನಡೆಸಿಕೊಂಡು ಬರುತ್ತಿರುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಜ್ಞಾನಿಗಳ ನುಡಿಗಳನ್ನು ಕೇಳಿದರೆ ಮನಸ್ಸು ಅಂತಃಕರಣ ಶುದ್ದಿಯಾಗುತ್ತದೆ. ಅಂತಃಕರಣದ ಕನ್ನಡಿ ಮೇಲೆ ಮನಸ್ಸು ಧೂಳು ಕೂರಲು ಬಿಡಬಾರದು. ಅಜ್ಞಾನದಿಂದ ಬೇದ, ಅಸಮಾನತೆ, ತಾರತಮ್ಯವೇರ್ಪಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಜ್ಞಾನ ಬೆಳೆಸಿಕೊಳ್ಳಿ ಎಂದರು.

          ಹುಬ್ಬಳ್ಳಿ-ಬಿಜಾಪುರ ಶಾಂತಾಶ್ರಮ ಷಣ್ಮುಖಾರೂಢ ಮಠದ ಶಿವಪುತ್ರ ಮಹಾಸ್ವಾಮಿಗಳು ಮಾತನಾಡುತ್ತ ಮನಸ್ಸು ಬಹಳ ಮುಖ್ಯ, ಬೇಡರಕಣ್ಣಪ್ಪ, ಕನಕದಾಸ, ಕುಂಬಾರರು ಇವರುಗಳೆಲ್ಲಾ ಇಚ್ಚಾಶಕ್ತಿಯಿಂದ ಆತ್ಮಶಕ್ತಿಯನ್ನು ಬೆಳೆಸಿಕೊಂಡರು. ಮಕ್ಕಳಿಗೆ ಸಾಮಾನ್ಯ ಜ್ಞಾನವನ್ನು ಮನೆಯಲ್ಲಿ ತಾಯಿ ಹೇಳಿಕೊಡಬೇಕು. ಶಾಲಾ-ಕಾಲೇಜುಗಳು ಬರೀ ಶಿಕ್ಷಣ ಕಲಿಸುತ್ತವೆ. ಸಾಮಾನ್ಯ ಜ್ಞಾನವನ್ನು ಕಲಿಸುವುದಿಲ್ಲ ಎಂದು ವಿಷಾಧಿಸಿದರು.ತಾಯಿ-ತಂದೆ, ಗುರು-ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು. ಅದಕ್ಕಾಗಿ ಮನಸ್ಸು, ಹೃದಯ ಸ್ವಚ್ಚವಾಗಿರಬೇಕು ಎಂದು ಹೇಳಿದರು.

          ಹಣ, ಅಂತಸ್ತು ಇದ್ದಾಗ ಮನುಷ್ಯ ಸ್ನೇಹ ಮತ್ತು ಸಂಬಂಧ, ಸಂಸ್ಕಾರ ಕಳೆದುಕೊಳ್ಳುತ್ತಾನೆ ಅದಕ್ಕಾಗಿ ಪ್ರತಿ ವರ್ಷವೂ ಕಬೀರಾನಂದಾಶ್ರಮದಲ್ಲಿ ನಡೆಯುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಸಾಧು, ಶರಣ, ಸಂತರು ಹೇಳುವ ನುಡಿಗಳನ್ನು ಆಲಿಸಿ ಜೀವನದಲ್ಲಿ ಸಂಸ್ಕಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

         ಬ್ರಹ್ಮವಿದ್ಯಾನಗರ ಭಗೀರಥಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ ಕಬೀರಾನಂದಾಶ್ರಮದಲ್ಲಿ ಪ್ರತಿ ವರ್ಷವೂ ಭಕ್ತಿ, ಜ್ಞಾನ, ಸಾಂಸ್ಕತಿಕ ಶ್ರೀಮಂತಿಕೆಯ ಕಾರ್ಯಕ್ರಮಗಳು ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಅವಧೂತ ಪರಂಪರೆಯ ಈ ಆಶ್ರಮ ಭಕ್ತರನ್ನು ಸನ್ಮಾರ್ಗದತ್ತ ಕರೆದುಕೊಂಡು ಹೋಗುತ್ತಿದೆ. ಜೀವನದಲ್ಲಿ ಹಲವು ರೀತಿಯ ಋಣಗಳನ್ನು ತೆಗೆದುಕೊಂಡು ಬಂದಿದ್ದೇವೆ. ತಂದೆ-ತಾಯಿ, ಗುರು-ಹಿರಿಯರ ಋಣವನ್ನು ಪ್ರತಿಯೊಬ್ಬರು ತೀರಿಸಲೇಬೇಕು. ಧರ್ಮಮಾರ್ಗ, ಸನ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆ ಎಲ್ಲರಿಗೂ ಪ್ರಾಪ್ತಿಯಾಗುತ್ತದೆ ಎಂದರು.

          ಯಾಂತ್ರಿಕ ಬುದುಕಿನಲ್ಲಿ ಮನುಷ್ಯ ಭಗವಂತನನ್ನು ಮರೆತಿದ್ದಾನೆ. ತೊಂದರೆಯಾದಾಗ ಮಾತ್ರ ಎಲ್ಲರೂ ದೇವರನ್ನು ನೆನಪಿಸಿಕೊಳ್ಳುತ್ತಾರೆ. ಆಸೆ, ಆಮಿಷಗಳಿಗೆ ಒಳಗಾಗಿ ಅಚಾತುರ್ಯವೆಸಗುವ ಬದಲು ಭಗವಂತನ ಸೇವೆ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದು ಹೇಳಿದರು.

          ಭೋವಿಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡುತ್ತ ಕಾಲ ಕೆಟ್ಟಿಲ್ಲ. ಮನಸ್ಸು ಕೆಟ್ಟಿದೆ. ಸಮಾಜವನ್ನು ನಿಂತ ನೀರಾಗಿಸದೆ ಹರಿಯುವ ನೀರನ್ನಾಗಿಸಬೇಕು. ಭಕ್ತಿಯ ಜೊತೆ ಪ್ರಜ್ಞೆ ಬೇಕು, ಶಿಕ್ಷಣ ಪ್ರಜ್ಞೆಯನ್ನು ಕೊಡುವುದಿಲ್ಲ. ಹಾಗಾಗಿ ಪ್ರಜ್ಞಾವಂತರನ್ನು ಸೃಷ್ಟಿಸುವ ಶಿಕ್ಷಣ ಬೇಕಾಗಿದೆ. ಮಠ ಪೀಠಗಳಲ್ಲಿ ಬೆಳೆದವರು ಪ್ರಜ್ಞಾವಂತರಾಗುತ್ತಿದ್ದಾರೆ. ಅಹಿಂಸೆ ಸೌಹಾರ್ಧ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತದೆ. ಎಲ್ಲರೂ ಸರ್ಕಾರಿ ನೌಕರಿಗಾಗಿ ಕಾಯುವ ಬದಲು ಕೌಶಲ್ಯ ಪ್ರಜ್ಞೆ ಮೂಲಕ ಔದ್ಯೋಗಿಕ ಕ್ರಾಂತಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.

         ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಕಬೀರಾನಂದಾಶ್ರಮ 89 ನೇ ಮಹಾಶಿವರಾತ್ರಿ ಮಹೋತ್ಸವ ಆಚರಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ರಾಜರು, ಋಷಿಮುನಿಗಳು ಹಿಂದೆ ಲೋಕ ಕಲ್ಯಾಣಕ್ಕಾಗಿ ಯಾಗ ಯಜ್ಞಾದಿಗಳನ್ನು ಮಾಡುತ್ತಿದ್ದರು. ಅದೆ ರೀತಿ ಕಬೀರಾನಂದಾಶ್ರಮ ಪ್ರತಿ ವರ್ಷವೂ ಮಹಾಶಿವರಾತ್ರಿ ಮಹೋತ್ಸವ ಆಚರಿಸುವ ಮೂಲಕ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

         ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡುತ್ತ ಅಂಧಕಾರದಲ್ಲಿ ತೊಡಗಿರುವವರನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಕೆಲಸವನ್ನು ಮಠಗಳು ಮಾಡುತ್ತಿವೆ. ಮಠ ಮಾನ್ಯಗಳಿಲ್ಲದಿದ್ದರೆ ದೊಡ್ಡ ಗಂಡಾಂತರಗಳನ್ನು ಎದುರಿಸಬೇಕಾಗಿತ್ತು. ದೇಶದಲ್ಲಿ ಅಶಿಸ್ತು, ಅಶಾಂತಿ ತಾಂಡವವಾಡುತ್ತಿದೆ. ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿ ಹಣ ಗಳಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರಕೃತಿಗೆ ಬೆಂಕಿ ಹಚ್ಚುವವರಿದ್ದಾರೆ.

        ಲಂಗು ಲಗಾಮಿಲ್ಲದ ಸಮಾಜವನ್ನು ಹತೋಟಿಗೆ ತರಬೇಕಾದರೆ ಮಠಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಚುನಾವಣೆಯಲ್ಲಿ ಮತಗಳನ್ನು ಮಾರಾಟ ಮಾಡುವುದರಿಂದ ದೇಶದ ವ್ಯವಸ್ಥೆಯೇ ಹಾಳಾಗಿದೆ. ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ಕರೆದುಕೊಂಡು ಹೋಗುವ ಕೆಲಸಗಳನ್ನು ಸ್ವಾಮೀಜಿಗಳು ಮಾಡಬೇಕು ಎಂದು ವಿನಂತಿಸಿದರು.

        ಕೋಟೆ ಸ್ಮಾರಕಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪ್ರೊ.ಹೆಚ್.ಶ್ರೀಶೈಲ ಆರಾಧ್ಯ ಹಾಗೂ ಉಮಾದೇವಿ ದಂಪತಿಗಳನ್ನು ಸನ್ಮಾನಿಸಲಾಯಿತು.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ನಗರಸಭೆ ಸದಸ್ಯೆ ಪೂಜಾ ಮಂಜುನಾಥ್, ಜಿ.ಪಂ.ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಜೆ.ಡಿ.ಎಸ್.ಮುಖಂಡ ಆನಂದ್, ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ ವೇದಿಕೆಯಲ್ಲಿದ್ದರು. ಮಾತೃಶ್ರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನೆರವೇರಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link