ತುಮಕೂರು:
ಅಕ್ಕನಾಗಮ್ಮ ಬಸವಣ್ಣನವರ ಎಲ್ಲಾ ಚಿಂತನೆಗೆ ಇಂಬಾಗಿ ನಿಂತು ನೀರೆರೆದು ಪೋಷಿಸಿದರು. ದೀನ ದಲಿತರ, ನೊಂದವರ ದನಿಯಾದಳು. ಅಂದಿನ ಸಾಂಪ್ರದಾಯಿಕ ಸಂಕೋಲೆಗಳನ್ನು ದಾಟಿ ಬಸವಣ್ಣನೊಂದಿಗೆ ಕಲ್ಯಾಣದಲ್ಲಿ ಮಹಾಮನೆಯ ತಾಯಾದಳು. ಬಸವಣ್ಣನವರ ಕಾಯಕ ತತ್ವಕ್ಕೆ, ದಾಸೋಹಕ್ಕೆ ನೀರೆರೆದವಳು. ಮನೆ ಮನೆಗೆ ತೆರಳಿ ಶರಣೆಯರಲ್ಲಿ ಜಾಗೃತಿ ಮೂಡಿಸಿ ಆತ್ಮವಿಶ್ವಾಸ ಮೂಡಿಸಿದಳು ಅಕ್ಕನಾಗಮ್ಮ ಎಂದು ಜ್ಯೋತಿ ಆನಂದ್ ತಿಳಿಸಿದರು.
ಅವರು ಅಕ್ಕನ ಬಳಗದಲ್ಲಿ ಕದಳಿ ಮಹಿಳಾ ವೇದಿಕೆ ಏರ್ಪಡಿಸಿದ್ದ ಮಾಸಿಕ ಸಭೆಯಲ್ಲಿ ಮಾತನಾಡುತ್ತಾ ಬಸವಣ್ಣನವರ ದೊಡ್ಡ ಅಭಿಮಾನಿ ನಾಗಮ್ಮ, ಈ ಶತಮಾನಕ್ಕೂ ನಾವು ವಚನಗಳ ಸಾರವನ್ನು ಸವಿಯುವುದಾದರೆ ಅದು ಅಕ್ಕನಾಗಮ್ಮನವರ ವಿಶೇಷ ಕಾಳಜಿ ಮತ್ತು ಹೋರಾಟದ ಫಲವಾಗಿಯೇ ಎಂದು ಬಣ್ಣಿಸಿದರು.
ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಪ್ರಭು ಮಾತನಾಡುತ್ತಾ ಅಕ್ಕನಾಗಮ್ಮ ಅಮೂಲ್ಯ ಸ್ತ್ರೀರತ್ನ. ತರೀಕೆರೆಯ ಎಣ್ಣೆ ಹೊಳೆಯಲ್ಲಿ ನೀರಿನಲ್ಲಿಯೇ ದೀಪ ಉರಿಸಿದ ಸತ್ಯವಂತೆಯಾಗಿದ್ದಳು. ಈ ಕಾರಣದಿಂದಾಗಿಯೇ ಇಲ್ಲಿಗೆ ಎಣ್ಣೆಹೊಳೆ ಎಂಬ ಹೆಸರು ಬಂದಿತೆಂದರು. ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ದಶಮಾನೋತ್ಸವದ ತಯಾರಿ ಕುರಿತು ಸಭೆಯಲ್ಲಿ ಚರ್ಚಿಸಯಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ನಾಗರತ್ನ ಚಂದ್ರಪ್ಪ, ಕಾರ್ಯದರ್ಶಿ ಜಯಂತಿ ಚಿತ್ರರಂಜನ್, ಖಜಾಂಚಿ ವಿಜಯಮ್ಮ ಅವರುಗಳು ಉಪಸ್ಥಿತರಿದ್ದರು. ರಾಗಿಣಿ ಪ್ರಾರ್ಥಿಸಿದರೆ, ಶಿವಲಿಂಗಮ್ಮ ಸ್ವಾಗತಿಸಿದರು. ಸುಮಾ ಪ್ರಸನ್ನ ನಿರೂಪಿಸಿದರು.